ರಾಜ್ಯಸಭಾ ಬಿಜೆಪಿ ಸದಸ್ಯ ಲಹರ್ ಸಿಂಗ್ ಅವರು ಸಿದ್ದರಾಮಯ್ಯ ಅವರನ್ನು ಟೀಕಿಸಿ, ಕೇವಲ ಕಾಲಾವಧಿಯ ದಾಖಲೆ ಮುರಿದ ಕಾರಣಕ್ಕೆ ಅವರು ಮತ್ತೊಬ್ಬ ದೇವರಾಜ ಅರಸು ಆಗಲಾರರು ಎಂದು ಹೇಳಿದ್ದಾರೆ. 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರದಿಂದಲೇ ನಾಯಕತ್ವದ ಗೊಂದಲ ಆಡಳಿತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಅವರು ಆರೋಪಿಸಿದ್ದಾರೆ.
ತೆಲಂಗಾಣ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕ ಸರ್ಕಾರದ ಮೇಲೆ ತುಂಬಾ ಅವಲಂಬಿತವಾಗಿತ್ತು ಎಂದು ಲಹರ್ ಸಿಂಗ್ ಟೀಕಿಸಿದರು. ನವೆಂಬರ್ ಕ್ರಾಂತಿ ಕುರಿತ ರಾಜಕೀಯ ಚರ್ಚೆಗಳು ಸರ್ಕಾರ ಮತ್ತು ಪಕ್ಷದ ಒಳಗೇ ತೀವ್ರವಾಗಿದ್ದು, ನಾಯಕತ್ವ ಬದಲಾವಣೆ ಕುರಿತು ನಿರಂತರ ಮಾತುಗಳು ಕೇಳಿ ಬರುತ್ತಿವೆ ಎಂದರು.
ಗ್ಯಾರಂಟಿ ಯೋಜನೆಗಳು ಮತ್ತು ಜಾತಿ ಸಮೀಕ್ಷೆಯಿಂದ ಸರ್ಕಾರದ ಖಜಾನೆ ಖಾಲಿಯಾಗಿದ್ದು, ಪಕ್ಷದ ಒಳಗಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ. ವಾಲ್ಮೀಕಿ ಸಮುದಾಯದ ಹಕ್ಕುಗಳ ಕುರಿತ ವಿವಾದ, ಲಿಂಗಾಯತ–ಒಕ್ಕಲಿಗ–ದಲಿತ ಸಮುದಾಯಗಳ ಆಕ್ಷೇಪಣೆಗಳು ಸಿದ್ದರಾಮಯ್ಯ ನೇತೃತ್ವಕ್ಕೆ ಸವಾಲು ತರುತ್ತಿವೆ ಎಂದು ಅವರು ಹೇಳಿದ್ದಾರೆ.
ದೇವರಾಜ ಅರಸು ಹಿಂದುಳಿದ ವರ್ಗದ ಶ್ರೇಷ್ಠ ನಾಯಕನಾಗಿದ್ದು, ಅವರ ದೂರದೃಷ್ಟಿ ಮತ್ತು ಬದ್ಧತೆಯಿಂದ ಅನೇಕರಿಗೆ ರಾಜಕೀಯ ವೇದಿಕೆ ಸಿಕ್ಕಿತು. ಸಿದ್ದರಾಮಯ್ಯ ಅವರು ದಾಖಲೆ ಮುರಿಯುವ ಮೂಲಕ ಅಥವಾ ಅನುಕರಣೆಯಿಂದ ಅರಸುವಿನ ಸ್ಥಾನ ಪಡೆಯಲು ಸಾಧ್ಯವಿಲ್ಲ ಎಂದು ಲಹರ್ ಸಿಂಗ್ ವ್ಯಂಗ್ಯವಾಡಿದ್ದಾರೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ