ರಾಜ್ಯದ ಮಳೆ ಹಾನಿಗೆ ಕೇಂದ್ರ ಸರ್ಕಾರ ಈಗಾಗಲೇ NDRF ಅನುದಾನ ಬಿಡುಗಡೆ ಮಾಡಿದೆ. ಆದರೆ ಆ ಹಣವನ್ನು ರೈತರ ಪರಿಹಾರಕ್ಕೆ ಬಳಸದೆ, ರಾಜ್ಯ ಸರ್ಕಾರ ತನ್ನ ಉಚಿತ ಯೋಜನೆಗಳಿಗೆ ವರ್ಗಾಯಿಸಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.
ಬೆಳಗಾವಿ ಜಿಲ್ಲೆ ನಾಗನೂರಿನಲ್ಲಿ ಬೆಳೆ ಹಾನಿಗೊಳಗಾದ ರೈತರೊಂದಿಗೆ ನಡೆದ ಸಭೆಯಲ್ಲಿ ಆರ್. ಅಶೋಕ್ ಮಾತನಾಡಿದ್ದಾರೆ. ಕೇಂದ್ರ ಸರ್ಕಾರ ಪ್ರತಿ ನಾಲ್ಕು ತಿಂಗಳಿಗೆ NDRF ಮೂಲಕ ಎಲ್ಲ ರಾಜ್ಯಗಳಿಗೂ ವಿಪತ್ತು ನಿರ್ವಹಣಾ ನಿಧಿ ಬಿಡುಗಡೆ ಮಾಡುತ್ತದೆ. ಹಾಗೆಯೇ ಕರ್ನಾಟಕಕ್ಕೂ ಹಣ ಬಂದಿದೆ. ಆದರೆ ಈ ಸರ್ಕಾರ ಅದನ್ನು ರೈತರಿಗೆ ನೀಡದೆ ತಮ್ಮ ‘ಫ್ರೀ ಯೋಜನೆಗಳಿಗೆ’ ಖರ್ಚು ಮಾಡಿದೆ ಎಂದು ಹೇಳಿದರು.
ಇತ್ತೀಚಿನ ಮಳೆ ಹಾನಿಗೆ ಕೇಂದ್ರದಿಂದ ಹೆಚ್ಚುವರಿ ಅನುದಾನ ಪಡೆಯಲು ರಾಜ್ಯ ಸರ್ಕಾರ ವರದಿ ಸಲ್ಲಿಸಬೇಕು. ಆದರೆ ವರದಿ ಸಲ್ಲಿಸದೆ, ಕೇಂದ್ರ ಹಣ ನೀಡುವುದಿಲ್ಲ ಎಂದು ಜನರನ್ನೇ ತಪ್ಪುಮಾರ್ಗಕ್ಕೆ ಒಯ್ಯುತ್ತಿದ್ದಾರೆ ಎಂದು ಟೀಕಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿ ಪ್ರವಾಸದ ಬಗ್ಗೆ ಮಾತನಾಡಿದ ಅಶೋಕ್, ಎರಡು ತಿಂಗಳಿಂದ ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾಗಿದೆ. ಜನರು ಸಂಕಷ್ಟದಲ್ಲಿದ್ದಾರೆ. ಆದರೆ ಸಿಎಂ ಜನರ ಕಷ್ಟ ಕೇಳಲು ಬರಲಿಲ್ಲ. ನಾಳೆ ಉದ್ಘಾಟನೆ ಸಮಾರಂಭಕ್ಕೆ ಮಾತ್ರ ಬರುತ್ತಿದ್ದಾರೆ. ಬಂದು ಬಿರಿಯಾನಿ ತಿಂದು ಹೋಗುತ್ತಾರೆ. ಆದರೆ ನಾವು ರೈತರ ಸಂಕಷ್ಟ ಕೇಳಲು ಬಂದಿದ್ದೇವೆ ಎಂದು ಕಿಡಿಕಾರಿದರು.
ವರದಿ : ಲಾವಣ್ಯ ಅನಿಗೋಳ