ದೆಹಲಿ: ದೆಹಲಿಯಲ್ಲಿ ರಾಹುಲ್ ಜೊತೆ ರಾಜ್ಯ ಕೈ ನಾಯಕರ ಸಭೆ ನಡೆಯುತ್ತಿದ್ದು, ರಾಜ್ಯ ರಾಜಕಾರಣದ ಬಗ್ಗೆ ಸಂಪೂರ್ಣ ಮಾಹಿತಿಯನ್ನ ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ನೀಡಿದ್ದಾರೆ.
ಸಮ್ಮಿಶ್ರ ಸರ್ಕಾರದಲ್ಲಿ ಉಂಟಾಗಿರೋ ಅಸಮಾಧಾನ ಸ್ಫೋಟ ಹಾಗೂ ಇನ್ನಿತರ ವಿಚಾರಗಳ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ರಾಹುಲ್ ಗಾಂಧಿ ಬಳಿ ಚರ್ಚಿಸಿದ್ರು. ಈ ವೇಳೆ ಸಮ್ಮಿಶ್ರ ಸರ್ಕಾರದ ಮೇಲೆ ದೂರುಗಳ ಸುರಿಮಳೆಗೈದಿದ್ದಾರೆ.
ಸಮ್ಮಿಶ್ರ ಸರ್ಕಾರದಲ್ಲಿ ಕೆಲವೊಂದು ಸಮಸ್ಯೆಗಳಿವೆ, ನಮ್ಮ ಶಾಸಕರ ಕೆಲಸಗಳು ನಡೆಯುತ್ತಿಲ್ಲ ಅಂತ ಸ್ವತಃ ಶಾಸಕರಿಂದಲೇ ದೂರುಗಳು ಕೇಳಿಬರುತ್ತಿವೆ. ಕ್ಷೇತ್ರಗಳ ಅನುದಾನದ ವಿಚಾರದಲ್ಲೂ ಸಮಸ್ಯೆ ಎದುರಾಗಿದೆ ಅಂತ ಬೆಂಗಳೂರು ಶಾಸಕರಿಂದಲೇ ಹೆಚ್ಚು ದೂರು ಬಂದಿದೆ. ಬೆಂಗಳೂರಿನಲ್ಲಿ ರಸ್ತೆಗಳ ಅಭಿವೃದ್ಧಿಯಾಗುತ್ತಿಲ್ಲ, ಗುಂಡಿ ಬಿದ್ದಿರೋ ರಸ್ತೆಗಳಿಗೆ ಡಾಂಬರು ಹಾಕಿಸೋದಕ್ಕೂ ಅನುದಾನ ಬಿಡುಗಡೆಯಾಗುತ್ತಿಲ್ಲ. ಚರಂಡಿ ಕಾಮಗಾರಿ ಸೇರಿದಂತೆ ಇತರೆ ಕಾಮಗಾರಿಗಳು ಕುಂಟುತ್ತಾ ಸಾಗಿವೆ ಅಂತ ಶಾಸಕರಿಂದ ದೂರುಗಳು ಬಂದಿವೆ. ಈ ವಿಚಾರವನ್ನ ನಾನು ಸೇರಿದಂತೆ ಶಾಸಕರೂ ಸಿಎಂ ಕುಮಾರಸ್ವಾಮಿ ಗಮನಕ್ಕೂ ತಂದರೂ ಸಹ ಅದು ಹಾಗೇ ಇದೆ. ಹೀಗಾಗಿ ಪದೇ ಪದೇ ಶಾಸಕರು ಧ್ವನಿ ಎತ್ತುತ್ತಿದ್ದಾರೆ. ನಾನು ಅವರನ್ನ ಸಮಾಧಾನಪಡಿಸುತ್ತಲೇ ಇದ್ದೇನೆ. ಇದರಿಂದಲೇ ನನಗೂ ಸ್ವಲ್ಪ ಅಸಮಾಧಾನ ಇದೆ ಅಂತ ಸಿದ್ದರಾಮಯ್ಯ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಳಿ ದೂರುಗಳ ಪಟ್ಟಿ ನೀಡಿದ್ದಾರೆ.