ಬಸ್ ಪ್ರಯಾಣಿಕರ ಮೇಲಿನ ಆರ್ಥಿಕ ಹೊರೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದ್ದು, ಈಗಾಗಲೇ ಟಿಕೆಟ್ ದರ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರಿಗೆ ಈಗ ಮತ್ತೊಂದು ಆಘಾತ ಎದುರಾಗಿದೆ. ಹೌದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಬಸ್ಗಳಲ್ಲಿ ಸಾಗಿಸುವ ಲಗೇಜ್ ಶುಲ್ಕವನ್ನು ಅಧಿಕೃತವಾಗಿ ಪರಿಷ್ಕರಿಸಿದ್ದು, ಇಂದಿನಿಂದಲೇ ಹೊಸ ದರಗಳು ರಾಜ್ಯಾದ್ಯಂತ ಜಾರಿಗೆ ಬಂದಿವೆ.
ದೈನಂದಿನ ಪ್ರಯಾಣಿಕರು, ವಿದ್ಯಾರ್ಥಿಗಳು ಹಾಗೂ ಸಣ್ಣ ಪುಟ್ಟ ವ್ಯಾಪಾರಿಗಳ ಜೇಬಿಗೆ ಇದು ನೇರವಾಗಿ ಕತ್ತರಿ ಬೀಳಲಿದ್ದು, ದೂರದೂರುಗಳಿಗೆ ಪ್ರಯಾಣಿಸುವಾಗ ಬ್ಯಾಗ್ ಅಥವಾ ಹೆಚ್ಚಿನ ಸಾಮಗ್ರಿಗಳನ್ನು ಕೊಂಡೊಯ್ಯುವವರಿಗೆ ಈ ದರ ಏರಿಕೆ ದೊಡ್ಡ ಹೊರೆಯಾಗಲಿದೆ. ಸಾರಿಗೆ ನಿಗಮವು ಲಗೇಜ್ ಸಾಗಣೆ ಶುಲ್ಕವನ್ನು ಗಮನಾರ್ಹವಾಗಿ ಹೆಚ್ಚಿಸಿದೆ.
ಆದರೂ, ಸಾಮಾನ್ಯ ಪ್ರಯಾಣಿಕರಿಗೆ ಅನುಕೂಲವಾಗಲೆಂದು ನಿಗಮವು ಕೆಲವು ವಿನಾಯಿತಿಗಳನ್ನಂತೂ ಕಲ್ಪಿಸಿದೆ. ಇದರನ್ವಯ ಪ್ರಯಾಣಿಕರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ 10 ಕೆ.ಜಿ.ವರೆಗಿನ ಲಗೇಜ್ ಅನ್ನು ಉಚಿತವಾಗಿ ಸಾಗಿಸಬಹುದು. ಅಷ್ಟೇ ಅಲ್ಲದೆ, 20 ಕೆ.ಜಿ.ವರೆಗಿನ ಕೆಲವು ನಿರ್ದಿಷ್ಟ ಸಾಮಗ್ರಿಗಳಿಗೂ ಉಚಿತ ಅವಕಾಶವಿದ್ದು, ಈ ಮಿತಿಗಿಂತ ಹೆಚ್ಚಿನ ತೂಕ ಅಥವಾ ಅಳತೆ ಇದ್ದರೆ ಮಾತ್ರ ಹೊಸ ನಿಯಮದಡಿ ಶುಲ್ಕ ವಿಧಿಸಲಾಗುತ್ತದೆ.
ಹೊಸ ಲಗೇಜ್ ದರ ಪಟ್ಟಿಯನ್ನು ಗಮನಿಸುವುದಾದರೆ; ಮೊದಲ 5 ಸ್ಟೇಜ್ಗಳಿಗೆ ಇದ್ದ ಹಳೆಯ 6 ರೂಪಾಯಿ ಶುಲ್ಕವನ್ನು ಈಗ 10 ರೂಪಾಯಿಗೆ ಹೆಚ್ಚಿಸಲಾಗಿದೆ. ಇನ್ನು 6 ರಿಂದ 10 ಸ್ಟೇಜ್ವರೆಗೆ 10 ರೂ. ಇದ್ದದ್ದು 15 ರೂಪಾಯಿಗೆ ಏರಿಕೆಯಾಗಿದೆ. ಹಾಗೆಯೇ 11 ರಿಂದ 15 ಸ್ಟೇಜ್ಗಳವರೆಗೆ 20 ರೂಪಾಯಿ ಇದ್ದ ಶುಲ್ಕವನ್ನು ಈಗ 25 ರೂಪಾಯಿಗೆ ಪರಿಷ್ಕರಿಸಲಾಗಿದೆ.
ಹೀಗಾಗಿ ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಬರುವ ಮುನ್ನ ತಮ್ಮ ಸಾಮಗ್ರಿಗಳ ತೂಕ ಹಾಗೂ ಹೊಸ ದರಗಳ ಬಗ್ಗೆ ಮಾಹಿತಿ ಹೊಂದಿರುವುದು ಉತ್ತಮ. ಇದು ಪ್ರಯಾಣದ ವೇಳೆ ಅನಗತ್ಯ ವಾಗ್ವಾದಗಳನ್ನು ತಪ್ಪಿಸಲು ಸಹಕಾರಿಯಾಗುತ್ತದೆ ಎಂದೇ ಹೇಳಬಹುದು.




