ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದನ್ನು ವಿರೋಧಿಸಿ, ಬಿಜೆಪಿ ನಾಯಕರು ಚಾಮುಂಡಿ ಬೆಟ್ಟ ಚಲೋ ಕಾರ್ಯಕ್ರಮ ಕೈಗೊಂಡರು. ಈ ಸಂದರ್ಭದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಶ್ರೀವತ್ಸ, ಮಾಜಿ ಶಾಸಕ ಎಲ್. ನಾಗೇಂದ್ರ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಸರ್ಕಾರದ ಈ ನಿರ್ಧಾರವನ್ನು ಮೊದಲ ದಿನದಿಂದಲೇ ನಾವು ಆಕ್ರೋಶದಿಂದ ವಿರೋಧಿಸುತ್ತಿದ್ದೇವೆ. ಆದರೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ಸಿದ್ದರಾಮಯ್ಯ ಒಂದು ದಿನವೂ ಸಮರ್ಪಕವಾದ ಉತ್ತರ ನೀಡಿಲ್ಲ. ನಿಸಾರ್ ಅಹಮದ್ ಅವರಷ್ಟು ಸಾಹಿತ್ಯ ಜ್ಞಾನ ಸಿದ್ದರಾಮಯ್ಯ ಅವರಿಗೆ ಇದ್ದಿದ್ದರೆ, ಇಂತಹ ಹೇಳಿಕೆ ನೀಡುತ್ತಿರಲಿಲ್ಲ. ನಿಸಾರ್ ಅಹಮದ್ ಮತ್ತು ಸಿದ್ದರಾಮಯ್ಯ ಅವರ ಭಾಷಣದ ನಡುವೆ ವ್ಯತ್ಯಾಸವೇ ಇಲ್ಲ. ಮಾಡಿದ ತಪ್ಪಿಗೆ ಕನ್ನಡಿಗರಲ್ಲಿ ಕ್ಷಮೆಯಾಚಿಸುವ ಬದಲಿಗೆ ಜನರನ್ನು ನೋಯಿಸುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ಆರೋಪಿಸಿದರು.
ಪ್ರಜಾತಾಂತ್ರಿಕ ಹಕ್ಕನ್ನು ಹರಾಜು ಹಾಕಿ, ಪಾದಯಾತ್ರೆಗೆ ಅವಕಾಶ ನೀಡದೇ ಶಾಂತಿಯುತವಾಗಿ ನಡೆದುಕೊಂಡು ಹೋಗುತ್ತಿದ್ದವರನ್ನೇ ಬಂಧಿಸುವುದು ಸರಿಯಲ್ಲ. ಸಿದ್ದರಾಮಯ್ಯ ಅವರೇ, ಇದು ಸೆಕ್ಯುಲರ್ ಕಾರ್ಯಕ್ರಮವಲ್ಲ, ನಿಖರವಾಗಿ ಧಾರ್ಮಿಕ ಕಾರ್ಯಕ್ರವೇ. ವಿರೋಧ ಪಕ್ಷದ ನಾಯಕರಾಗಿದ್ದಾಗ ಬಳ್ಳಾರಿಗೆ ಪಾದಯಾತ್ರೆ ಮಾಡಿ, ಎಲ್ಲೆಡೆ ಸಮ್ಮೇಳನ ನಡೆಸಿದ್ರಿ. ಆಗ ಬಿಜೆಪಿ ಸರ್ಕಾರ ತಡೆ ಮಾಡಿತ್ತೆ? ಇಲ್ಲ. ಆದರೆ ಈಗ ನೀವು ತಾಲಿಬಾನ್ ಮಾದರಿಯ ಸರ್ಕಾರ ನಡೆಸುತ್ತಿರುವುದು ಜನರಿಗೆ ಸ್ಪಷ್ಟವಾಗುತ್ತಿದೆ ಎಂದು ಪ್ರತಾಪ್ ಸಿಂಹ ಗುಡುಗಿದರು.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ