2025 ರ ಬಿಹಾರ ಚುನಾವಣೆಗೆ ಕಾವು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಖ್ಯಾತ ಜಾನಪದ ಗಾಯಕಿ ಮೈಥಿಲಿ ಠಾಕೂರ್ ಮಂಗಳವಾರ ಅಕ್ಟೊಬರ್ 14 ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಪಾಟ್ನಾದ ಬಿಜೆಪಿ ರಾಜ್ಯ ಕಚೇರಿಯಲ್ಲಿ, ಪಕ್ಷದ ರಾಜ್ಯಾಧ್ಯಕ್ಷ ದಿಲೀಪ್ ಜೈಸ್ವಾಲ್ ಅವರ ಸಮ್ಮುಖದಲ್ಲಿ ಮೈಥಿಲಿ ಠಾಕೂರ್ ಅಧಿಕೃತವಾಗಿ ಪಕ್ಷದಲ್ಲಿ ಸೇರ್ಪಡೆಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಮೈಥಿಲಿ ಮಾತನಾಡಿದ್ದಾರೆ. ಬಿಹಾರ ಚುನಾವಣೆಯಲ್ಲಿ ಸ್ಪರ್ಧಿಸುವುದು ತಮ್ಮ ಗುರಿಯಾಗಿಲ್ಲದಿದ್ದರೂ, ಪಕ್ಷದ ಸೂಚನೆಗಳ ಪ್ರಕಾರ ಕಾರ್ಯನಿರ್ವಹಿಸುವುದಾಗಿ ತಿಳಿಸಿದ್ದಾರೆ. ಮಾಹಿತಿಯಂತೆ, ಮೈಥಿಲಿ ಠಾಕೂರ್ ಬರುವ ಬಿಹಾರ ಚುನಾವಣೆಯಲ್ಲಿ ಅಲಿನಗರ ವಿಧಾನಸಭಾ ಸ್ಥಾನದಿಂದ ಸ್ಪರ್ಧಿಸಬಹುದೆಂದು ಸೂಚನೆ ಬಂದಿದೆ.
ಬಿಜೆಪಿ ರಾಜ್ಯಾಧ್ಯಕ್ಷರು ಸಹ ಮೈಥಿಲಿ ಅಲಿನಗರದಿಂದ ಸ್ಪರ್ಧಿಸಬಹುದೆಂದು ಸಾರ್ವಜನಿಕರಿಗೆ ಸೂಚಿಸಿದ್ದು, ಜನರಲ್ಲಿ ಕುತೂಹಲವನ್ನು ಹುಟ್ಟುಹಾಕಿದೆ. ಹಾಗಾದ್ರೆ ಮೈಥಿಲಿ ಠಾಕೂರ್ ಯಾರು? ಎಂಬ ಕುತೂಹಲ ಎಲ್ಲರಲ್ಲೂ ಇದೆ. 25 ವರ್ಷದ ಮೈಥಿಲಿ ಠಾಕೂರ್ ಮಧುಬನಿ ಜಿಲ್ಲೆಯವರಾಗಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಸ್ಥಾನ ಪಡೆದಿದ್ದಾರೆ. ಬಾಲ್ಯದಿಂದಲೇ ಹಾಡಿನಲ್ಲಿ ಆಸಕ್ತಿ ಹೊಂದಿದ್ದರು.
ಇವರು ತಮ್ಮ ತಂದೆ ರಮೇಶ್ ಠಾಕೂರ್ ಮತ್ತು ತಾಯಿ ಭಾರತಿ ಠಾಕೂರ್ ಸಂಗೀತ ಕ್ಷೇತ್ರದ ಪರಿಣತರು. ಮೈಥಿಲಿ 11ನೇ ವಯಸ್ಸಿನಲ್ಲಿ ಜೀ ಟಿವಿ ಕಾರ್ಯಕ್ರಮ ‘ಸ ರೆ ಗ ಮ ಪ ಲಿಟಲ್ ಚಾಂಪ್ಸ್’ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಬಳಿಕ ಹಲವಾರು ಭಾಷೆಗಳಲ್ಲಿ ಹಾಡಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಈ ಹಿನ್ನಲೆಯಲ್ಲಿ, ಮೈಥಿಲಿ ಠಾಕೂರ್ ಬಿಜೆಪಿ ಸೇರ್ಪಡೆ ಬಿಹಾರ ರಾಜಕೀಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ವರದಿ : ಲಾವಣ್ಯ ಅನಿಗೋಳ

