ರಾಜ್ಯ ರಾಜಕೀಯದಲ್ಲಿ ಸದ್ಯ ನಾಯಕತ್ವ ಬದಲಾವಣೆಯ ಚರ್ಚೆ ತೀವ್ರಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ನವೆಂಬರ್‌ನಲ್ಲಿ ಎರಡು ವರ್ಷಗಳ ಅವಧಿ ಪೂರೈಸಲಿದೆ. ಇದೇ ಸಂದರ್ಭದಲ್ಲಿ ನಾಯಕತ್ವ ಬದಲಾವಣೆಯ ಸಾಧ್ಯತೆಗಳ ಕುರಿತು ರಾಜಕೀಯ ವಲಯದಲ್ಲಿ ಮಾತುಕತೆಗಳು ಸಕ್ರಿಯವಾಗಿವೆ.

ಒಂದು ಕಡೆ ಸಿಎಂ ಸ್ಥಾನ ಬದಲಾವಣೆ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಮತ್ತೊಂದು ಕಡೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಅಲ್ಲೋಕ ಕಲ್ಲೋಲ ಸೃಷ್ಟಿಸಿದೆ.ಸಿದ್ದರಾಮಯ್ಯ ಅವರು ರಾಜಕೀಯ ಸಂಧ್ಯಾಕಾಲದಲ್ಲಿದ್ದಾರೆ. ಸತೀಶ್ ಜಾರಕಿಹೊಳಿ ಅವರಂತವರು ಸಿದ್ದರಾಮಯ್ಯ ಸ್ಥಾನ ತುಂಬುವ ಶಕ್ತಿ ಹೊಂದಿದ್ದಾರೆ ಎಂದು ಯತೀಂದ್ರ ಹೇಳಿದ್ದಾರೆ. ಈ ಹೇಳಿಕೆ ರಾಜಕೀಯ ಪಡಸಾಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಹಾಗಾದ್ರೆ ಯತೀಂದ್ರ ಹೇಳಿಕೆ ಪೂರ್ವಯೋಜಿತ ತಂತ್ರವೇ? ಈ ಬಗ್ಗೆ ನೋಡೋದಾದ್ರೆ ಯತೀಂದ್ರ ಅವರ ಈ ಹೇಳಿಕೆ ಕೇವಲ ವೈಯಕ್ತಿಕ ಅಭಿಪ್ರಾಯವಲ್ಲ. ಅದು ಸಿದ್ದರಾಮಯ್ಯ ಅವರ ಮನದಾಳದ ಮಾತಾಗಿರಬಹುದು ಎಂಬ ಊಹೆಗಳು ವ್ಯಕ್ತವಾಗುತ್ತಿವೆ. ಕೆಲ ವಲಯಗಳಲ್ಲಿ ಇದು ರಾಜಕೀಯ ತಂತ್ರಗಾರಿಕೆಯ ಭಾಗವೆಂದು ವಿಶ್ಲೇಷಣೆ ನಡೆಯುತ್ತಿದೆ. ಸೂಕ್ತ ಸಮಯದಲ್ಲಿ ನೀಡಿದ ಈ ಹೇಳಿಕೆ ಹೈಕಮಾಂಡ್‌ಗೆ ಸ್ಪಷ್ಟ ಸಂದೇಶ ಕಳಿಸುವ ಪ್ರಯತ್ನವಾಗಿರಬಹುದೆಂಬ ಅಂದಾಜುಗಳು ಕೇಳಿಬರುತ್ತಿವೆ.
ಸದ್ಯ ಯತೀಂದ್ರ ಹೇಳಿಕೆ ಕಾಂಗ್ರೆಸ್‌ನಲ್ಲಿ ಹೇಗೆಲ್ಲಾ ಪರಿಣಾಮ ಬೀರಿದೆ? ಅಂದ್ರೆ ಯತೀಂದ್ರ ಅವರು ನೀಡಿರುವ ಹೇಳಿಕೆ ಸಹಜವಾಗಿ ಕಾಂಗ್ರೆಸ್ ಪಕ್ಷದಲ್ಲಿ ಸಂಚಲನ ಮೂಡಿಸಿದೆ. ನಾನಾ ರೀತಿಯ ಚರ್ಚೆಗಳು, ವ್ಯಾಖ್ಯಾನಗಳಿಗೆ ವೇದಿಕೆ ಕಲ್ಪಿಸಿದೆ. ಕಾಂಗ್ರೆಸ್‌ನಲ್ಲಿರುವ ಬಣಗಳ ನಡುವಿನ ಬಡಿದಾಟ ತೀವ್ರಗೊಳ್ಳಲು ಇದು ಮುಂದಿನ ದಿನಗಳಲ್ಲಿ ವೇದಿಕೆ ಕಲ್ಪಿಸಲಿದೆ. ಯಾರಿಗೆ ಏನು ಸಂದೇಶ ತಲುಪಬೇಕೋ ಅದನ್ನು ತಲುಪಿಸಿದೆ. ಸಿದ್ದರಾಮಯ್ಯ ಬಣ ಮೌನವಾಗಿಯೇ ತನ್ನ ತಂತ್ರಗಾರಿಕೆಯನ್ನು ನಡೆಸುತ್ತಿವೆ ಎಂಬುವುದು ಇದರಿಂದ ಸಾಬೀತಾಗಿದೆ. ಕಾಂಗ್ರೆಸ್ ಪಕ್ಷದ ರಾಜ್ಯ ನಾಯಕತ್ವ ಯಾವ ದಿಕ್ಕಿನಲ್ಲಿ ಇರಬೇಕು ಎಂಬುವುದನ್ನು ಈ ಹೇಳಿಕೆ ಸಾಬೀತು ಮಾಡಿದೆ.

ಯತೀಂದ್ರ ಅವರ ಈ ಹೇಳಿಕೆ ಕೇವಲ ವೈಯಕ್ತಿಕ ಅಭಿಪ್ರಾಯವಲ್ಲ, ಅದು ಸಿದ್ದರಾಮಯ್ಯ ಅವರ ಮನದಾಳದ ಮಾತಾಗಿರಬಹುದು ಎಂಬ ಊಹೆಗಳು ವ್ಯಕ್ತವಾಗುತ್ತಿವೆ. ವಕೀಲರಾಗಿದ್ದ ಸಿದ್ದರಾಮಯ್ಯ ಅವರು 1978ರಲ್ಲಿ ಮೈಸೂರು ತಾಲ್ಲೂಕು ಬೋರ್ಡ್ ಚುನಾವಣೆಯಿಂದ ರಾಜಕೀಯ ಪ್ರವೇಶಿಸಿದರು. ಕಳೆದ ನಾಲ್ಕು ದಶಕಗಳಲ್ಲಿ ಅವರು ಸಚಿವ, ಉಪಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಹಾಗೂ ಎರಡು ಬಾರಿ ಮುಖ್ಯಮಂತ್ರಿ ಸೇರಿದಂತೆ ಹಲವು ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಸದನದಲ್ಲಿ ಅಂಕಿ-ಅಂಶಗಳೊಂದಿಗೆ ವಾದಿಸುವ ನಿಪುಣತೆ, ಪ್ರಬಲ ಮಾತುಗಾರಿಕೆ ಮತ್ತು ಅಹಿಂದ ವರ್ಗದ ಬೆಂಬಲ ಇವುಗಳು ಸಿದ್ದರಾಮಯ್ಯ ಅವರ ಪ್ರಮುಖ ಬಲ. ಕೆಲವೊಂದು ಆರೋಗ್ಯ ಸಮಸ್ಯೆಗಳಿದ್ದರೂ ಅವರು ಇನ್ನೂ ರಾಜಕೀಯವಾಗಿ ಸಕ್ರಿಯರಾಗಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಅವರು ನಿವೃತ್ತಿಯ ಸಾಧ್ಯತೆ ಕಡಿಮೆ.
ಮುಂದಿನ ಬಾರಿ ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಈ ಹಿಂದೆಯೊಮ್ಮೆ ಹೇಳಿದ್ದರು. ಆದರೆ ಜನರ ತೀರ್ಮಾನವೇ ಅಂತಿಮ ಎಂದಿದ್ದರು. ಈ ಮೂಲಕ ಅವರು ರಾಜಕಾರಣದಲ್ಲಿ ಸಕ್ರಿಯವಾಗಿರುತ್ತೇನೆ ಎಂಬ ಸುಳಿವನ್ನು ನೀಡಿದ್ದರು. ಹಾಗಾಗಿ ಯತೀಂದ್ರ ಅವರು ಸಿಎಂ ಸಿದ್ದರಾಮಯ್ಯ ರಾಜಕೀಯ ಜೀವನದ ಕೊನೆಯ ಘಟ್ಟದಲ್ಲಿದ್ದಾರೆ ಎಂಬುವುದು ಯಾವ ಅರ್ಥದಲ್ಲಿ ನೀಡಿರುವ ಹೇಳಿಕೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯ ಅಹಿಂದ ಸಮುದಾಯದ ಪ್ರಮುಖ ಮುಖಂಡರಾಗಿದ್ದು, ಶೇಕಡಾ 25ರಷ್ಟು ಮತಗಳನ್ನು ಕಾಂಗ್ರೆಸ್‌ಗೆ ತರುವ ಸಾಮರ್ಥ್ಯ ಹೊಂದಿದ್ದಾರೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅವರ ಪ್ರಭಾವ ಸಶಕ್ತವಾಗಿದೆ. ರಾಹುಲ್ ಗಾಂಧಿಗೂ ಸಿದ್ದರಾಮಯ್ಯ ಅವರ ವೈಚಾರಿಕ ಸ್ಪಷ್ಟತೆ ಮೆಚ್ಚುಗೆಗೆ ಪಾತ್ರವಾಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಪ್ರಸ್ತುತ ಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರ ಸಕ್ರಿಯ ರಾಜಕೀಯ ಅಗತ್ಯ ಅತೀವ ಮಹತ್ವದ್ದಾಗಿದೆ.

ಇನ್ನು ಇದು ಬಿಟ್ಟರೆ ಕಾಂಗ್ರೆಸ್ ಪಕ್ಷದಲ್ಲಿ ಬೇರೆ ಘಟಾನುಘಟಿಗಳಿಲ್ಲವಾ? ಜಾರಕಿಹೊಳಿನೇ ಉತ್ತರಾಧಿಕಾರಿ ಯಾಕೆ? ಅನ್ನೋ ಪ್ರಶ್ನೆ ರಾಜ್ಯ ರಾಜಕೀಯದಲ್ಲಿ ಇದೀಗ ಸಿಕ್ಕಾಪಟ್ಟೆ ದೊಡ್ಡ ಮಟ್ಟಕ್ಕೆ ಚರ್ಚೆಯಾಗುತ್ತಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ನವೆಂಬರ್‌ನಲ್ಲಿ ಎರಡುವರೆ ವರ್ಷ ಪೂರೈಸಲಿದೆ. ಇದೇ ವೇಳೆಗೆ ಸಿಎಂ ಸ್ಥಾನ ಬದಲಾವಣೆಯ ಸಾಧ್ಯತೆಗಳ ಕುರಿತ ಮಾತುಗಳು ವೇಗ ಪಡೆದಿವೆ.
ಇದಕ್ಕೆ ತೀವ್ರತೆ ನೀಡಿದಂತಾಗಿದೆ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ನೀಡಿದ ಇತ್ತೀಚಿನ ಹೇಳಿಕೆ. ಸಿದ್ದರಾಮಯ್ಯ ರಾಜಕೀಯ ಸಂಧ್ಯಾಕಾಲದಲ್ಲಿದ್ದಾರೆ. ವೈಚಾರಿಕ ಚಿಂತನೆ ಹೊಂದಿರುವ ಸತೀಶ್ ಜಾರಕಿಹೊಳಿ ಅವರಲ್ಲಿ ಸಿದ್ದರಾಮಯ್ಯ ಸ್ಥಾನ ತುಂಬುವ ಶಕ್ತಿ ಇದೆ ಎಂದು ಅವರು ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಈ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಇನ್ನು ಕಾಂಗ್ರೆಸ್‌ನಲ್ಲಿ ಸಾಕಷ್ಟು ಘಟಾನುಘಟಿ ನಾಯಕರು ಇದ್ದಾರೆ. ಹಾಗಿರುವಾಗ ಸಿದ್ದರಾಮಯ್ಯ ಅವರ ಆಯ್ಕೆ ಕೇವಲ ಸತೀಶ್ ಜಾರಕಿಹೊಳಿ ಏಕೆ ಎಂಬ ಪ್ರಶ್ನೆ ಕಾಡುತ್ತಿದೆ. ಕೈ ಪಾಳಯದಲ್ಲಿ ಸತೀಶ್ ಜಾರಕಿಹೊಳಿ ಅವರನ್ನ ಬಿಟ್ಟರೆ ಬೇರೆ ದಿಗ್ಗಜರು ಇರಲಿಲ್ಲವೇ? ಸಿದ್ದರಾಮಯ್ಯ ಉತ್ತರಾಧಿಕಾರಿ ಸತೀಶ್ ಜಾರಕಿಹೊಳಿಯೇ ಯಾಕಾಗಬೇಕು? ಅನ್ನೋದನ್ನ ನೋಡೋದಾದ್ರೆ ಸತೀಶ್ ಜಾರಕಿಹೊಳಿ ಪ್ರಭಾವಿ ರಾಜಕೀಯ ಕುಟುಂಬದವರು.

ವಾಲ್ಮೀಕಿ ಸಮುದಾಯದ ಈ ನಾಯಕರು ವಿದ್ಯಾರ್ಥಿ ಒಕ್ಕೂಟದಿಂದಲೇ ತಮ್ಮ ರಾಜಕೀಯ ಪಯಣ ಆರಂಭಿಸಿದ್ದರು. ಜನಸಂಪರ್ಕ, ಸಂಘಟನಾ ಸಾಮರ್ಥ್ಯ ಮತ್ತು ವೈಚಾರಿಕ ನಿಲುವಿನಿಂದ ಅವರು ರಾಜ್ಯ ರಾಜಕೀಯದಲ್ಲಿ ತಮ್ಮದೇ ಗುರುತು ಮೂಡಿಸಿದ್ದಾರೆ. ಹೀಗಾಗಿ ಯತೀಂದ್ರ ಅವರ ಹೇಳಿಕೆ ಕಾಂಗ್ರೆಸ್ ಒಳಗಿನ ಬಣಗಳ ನಡುವೆ ಹೊಸ ಚರ್ಚೆಗಳಿಗೆ ವೇದಿಕೆ ಕಲ್ಪಿಸಿದೆ. ಕಾಂಗ್ರೆಸ್‌ನೊಳಗೆ ಹೊಸ ಚರ್ಚೆ ಹುಟ್ಟುಹಾಕಿದೆ.
ಸಿದ್ದರಾಮಯ್ಯ ಬಣವು ಈ ಹೇಳಿಕೆಯ ಮೂಲಕ ಹೈಕಮಾಂಡ್‌ಗೆ ಸ್ಪಷ್ಟ ಸಂದೇಶ ಕಳುಹಿಸಿರುವುದೇ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ. ಕೆಲವರು ಇದನ್ನು ಅಹಿಂದ ಬಣದ ನಾಯಕತ್ವವನ್ನು ಉಳಿಸಿಕೊಳ್ಳುವ ಪ್ರಯತ್ನವೆಂದು, ಮತ್ತಿತರರು ಸಿದ್ದರಾಮಯ್ಯ ಅವರ ರಾಜಕೀಯ ತಂತ್ರವೆಂದು ವಿಶ್ಲೇಷಿಸುತ್ತಿದ್ದಾರೆ.
ವಿಷಯ ಏನೇ ಇರಲಿ ಒಟ್ನಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ರಾಜಕೀಯ ಕಣದಲ್ಲಿನ ಹೊಸ ಚರ್ಚೆಗಳಿಗೆ ತಳಹದಿ ಹಾಕಿದೆ. ಸಿದ್ದರಾಮಯ್ಯ ಅವರ ನಿವೃತ್ತಿ ಅಥವಾ ಉತ್ತರಾಧಿಕಾರಿ ಆಯ್ಕೆ ಕುರಿತ ಸದ್ಯದ ಚಟುವಟಿಕೆಗಳು, ಮುಂದಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್‌ನ ನಾಯಕತ್ವ ಸಮೀಕರಣವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ.
ವರದಿ : ಲಾವಣ್ಯ ಅನಿಗೋಳ

