ಸಿದ್ದರಾಮಯ್ಯ ಹಿಂದುಳಿದವರ ಪರವಲ್ಲ – ರಾಜಕೀಯ ಲಾಭಕ್ಕಷ್ಟೇ!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ವಿರೋಧಿ. ತಮ್ಮ ರಾಜಕೀಯ ಲಾಭಕ್ಕಾಗಿ ಮಾತ್ರ ಕುರುಬ ಸಮುದಾಯವನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪವನ್ನು ಎಚ್. ವಿಶ್ವನಾಥ್ ಅವರು ಮಾಡಿದ್ದಾರೆ. ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ಮೂಲಕ ಮಾತನಾಡಿದ ಅವರು ಸಿದ್ದರಾಮಯ್ಯ ಅವರ ವಿರುದ್ಧ ಗಂಭೀರ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಅವರಿಗೆ ಯಾವಾಗಲೂ ರಾಜಕೀಯ ಸಂಕಷ್ಟ ಬಂದಾಗ ಮಾತ್ರ ಕುರುಬ ಸಮುದಾಯದ ನೆನಪು ಬರುತ್ತೆ. ಇದೀಗ ಸಿದ್ದರಾಮಯ್ಯಗೆ ಸಂಕಷ್ಟ ಬಂದಿದೆ. ಅವರು ಈ ಸಮುದಾಯಕ್ಕೆ ಯಾವುದೇ ಕೊಡುಗೆ ನೀಡಿಲ್ಲ. ನಾಯಕರನ್ನು ಬೆಳೆಸಲಿಲ್ಲ. ಈಗ ತನ್ನ ಗದ್ದುಗೆ ಉಳಿಸಿಕೊಳ್ಳಲು ಕುರುಬರನ್ನು ಎಸ್.ಟಿ ಶ್ರೇಣಿಗೆ ಸೇರಿಸುವ ಮಾತು ತಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ ಅವರನ್ನು ಹಿಂದುಳಿದ ವರ್ಗಗಳ ನಾಯಕ ಎಂದು ಹೊಗಳುವುದು ಮಿಥ್ಯ. ಅವರು ಬರೀ ಬೋಧನೆ, ಬೊಗಳಾಟ ಮಾತ್ರ ಮಾಡುತ್ತಾರೆ. ಹಿಂದುಳಿದ ವರ್ಗಗಳ ಹಕ್ಕಿಗಾಗಿ ನಿಜವಾದ ಹೋರಾಟವನ್ನೂ, ಯೋಜಿತ ಕೆಲಸವನ್ನೂ ಮಾಡಿಲ್ಲ ಎಂದರು.

ಕುರುಬ ಸಮುದಾಯದ ಗುರುಪೀಠವಾದ ಕಾಗಿನೆಲೆ ಮಠಕ್ಕೂ ಸಿದ್ದರಾಮಯ್ಯಗೂ ಯಾವುದೇ ನೈತಿಕ ಸಂಬಂಧವಿಲ್ಲ ಎಂಬುದನ್ನು ಎಚ್. ವಿಶ್ವನಾಥ್ ಎಚ್ಚರಿಸಿದ್ದಾರೆ. ಮಠಾಧಿಪತಿಗಳು ಕಾಂಗ್ರೆಸ್ ಪರವಾಗಿ ಬೀದಿಗಿಳಿದರೆ, ಅದು ನಿಮ್ಮ ತಲೆದಂಡವಾಗಲಿದೆ. ಅವರನ್ನು ಪೀಠದಿಂದ ಕೆಳಗಿಳಿಸುವ ಅವಶ್ಯಕತೆ ಬರಬಹುದು. ಪೀಠಾಧಿಪತಿ ಮಾಡಿದವರು ನಾನೇ, ಸಿದ್ದರಾಮಯ್ಯ ಅಲ್ಲ ಎಂದೂ ಹೇಳಿದರು.

ಜೊತೆಗೆ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದರೂ, ಇಂದು ಮಾತನಾಡುವಂತೆ ಅಧಿಸೂಚನೆ ಪಾಸ್ ಮಾಡಿರಲಿಲ್ಲ. ಬದಲು, ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ನಾವು ಶಿಫಾರಸ್ಸು ಕಳಿಸಿದ್ದೆವು. ಸಿದ್ದರಾಮಯ್ಯ ಸರ್ಕಾರ ಮಾತ್ರ ಅದನ್ನು ಕಾನೂನಾತ್ಮಕವಾಗಿ ತಡವಾಗಿ ಕಳುಹಿಸಿ ಅಡ್ಡಿಪಡಿಸಿದರು ಎಂದು ಎಚ್. ವಿಶ್ವನಾಥ್ ದೂರಿದರು.

ವರದಿ : ಲಾವಣ್ಯ ಅನಿಗೋಳ

About The Author