ಕುಮಾರಸ್ವಾಮಿಗೆ ಸಿದ್ದರಾಮಯ್ಯ ಪ್ರಶ್ನೆ ? ಉತ್ತರ ಕೊಡ್ತಾರ HDK?

ರಾಜ್ಯ ರಾಜಕೀಯದಲ್ಲಿ ಇಂದು ಭಾರೀ ಚರ್ಚೆಗೆ ಕಾರಣವಾದ ತೀವ್ರ ಹೇಳಿಕೆ—ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿಯವರ ವಿರುದ್ಧ ಖಡಕ್ ಪ್ರಶ್ನೆ ಎತ್ತಿದ್ದಾರೆ.

ಬಿಜೆಪಿಗೆ ಕೈಜೋಡಿಸಿದ ನಂತರ, ಕುಮಾರಸ್ವಾಮಿ ಅವರ ನಿಲುವು ಸಂಪೂರ್ಣವಾಗಿ ಬದಲಾಗಿದೆ… ಮತ್ತು ‘ಕುಮಾರಸ್ವಾಮಿ ಮನುವಾದಿ ಆಗಿಬಿಟ್ಟಿದ್ದಾರೆ’ ಎಂಬ ತೀವ್ರ ಟೀಕೆಯನ್ನು ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆ. ಈ ಆರೋಪ ರಾಜ್ಯ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ.

ವಿಧಾನಸೌಧದ ಮುಂಭಾಗದಲ್ಲಿ ನಡೆದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 69ನೇ ಮಹಾ ಪರಿನಿರ್ವಾಣ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಿಎಂ, ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಈ ಗಟ್ಟಿಯಾದ ಹೇಳಿಕೆ ಹೊರಹಾಕಿದರು.

ನಿನ್ನೆ, ಕೇಂದ್ರ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ಅವರಿಗೆ—ಭಗವದ್ಗೀತೆಯನ್ನು ಪಠ್ಯಕ್ರಮದಲ್ಲಿ ಸೇರಿಸಲು ಮನವಿ ಮಾಡಿದ್ದ ಹೆಚ್‌.ಡಿ. ಕುಮಾರಸ್ವಾಮಿಯವರ ಹೇಳಿಕೆ ಈಗ ವಿವಾದದ ಕೇಂದ್ರಬಿಂದುವಾಗಿದೆ. ಈ ವಿಷಯಕ್ಕೆ ಪ್ರತಿಕ್ರಿಯಿಸಿದ ಸಿಎಂ, ಬಿಜೆಪಿ ಜೊತೆಯಾದ ನಂತರ ಕುಮಾರಸ್ವಾಮಿ ಅವರ ಧೋರಣೆ ಮನುವಾದದತ್ತ ಸಾಗುತ್ತಿದೆ ಎಂದು ಆರೋಪಿಸಿದರು.

ಇದರ ನಡುವೆ, ಗೃಹ ಸಚಿವ ಪರಮೇಶ್ವರ್ ಅವರು ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿ ಅವರಿಗೆ ಹೇಗೋ ಅನಿಸಿದೆ, ಅದನ್ನೇ ಕೇಂದ್ರಕ್ಕೆ ಬರೆದಿದ್ದಾರೆ. ಇದು ಪೂರ್ಣವಾಗಿ ಕೇಂದ್ರ ಸರ್ಕಾರಕ್ಕೆ ಸೇರಿದ ವಿಷಯ ಎಂದು ಹೇಳಿದ್ದಾರೆ. ರಾಜ್ಯದ ರಾಜಕೀಯ ತಾಪಮಾನ ಏರಿಸಿದ ಈ ಮಾತಿನ ಚದುರಂಗ ಇನ್ನೂ ಎಡೆಬಿಡದೆ ಮುಂದುವರಿಯುತ್ತಿದ್ದೇ ಇದೆ. ಇದಕ್ಕೆ ಹೆಚ್‌ಡಿಕೆ ಹೇಗೆ ಉತ್ತರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ವರದಿ: ರಂಜಿತ ರೇವಣ್ಣ ನಾಟನಹಳ್ಳಿ

About The Author