ಸೆಪ್ಟೆಂಬರ್ 22ರಿಂದ ಆರಂಭವಾಗುವ ಜಾತಿಗಣತಿ ಸಿಎಂ ಸಿದ್ದರಾಮಯ್ಯ ಅವರ ಪಾಲಿಗೆ ಬಿಸಿತುಪ್ಪವಾಗಿದೆ. ಹಿಂದೂಗಳ ಜೊತೆ ಕ್ರಿಶ್ಚಿಯನ್ ಹೆಸರು ಸೇರಿಸಿರೋದಕ್ಕೆ, ಭಾರೀ ಆಕ್ರೋಶ ವ್ಯಕ್ತವಾಗಿದೆ. ಸೆಪ್ಟೆಂಬರ್ 18ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ, ಬೆಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗಿದೆ. ಸಭೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಸೇರಿ ಹಲವು ಸಚಿವರು ಕೆಂಡಾಮಂಡಲರಾಗಿದ್ದಾರೆ ಎನ್ನಲಾಗಿದೆ. ಸಿಎಂ ಸಿದ್ದರಾಮಯ್ಯ ಎದುರೇ ಏರು ದನಿಯಲ್ಲಿ ಕೆಲ ಸಚಿವರು ಮಾತನಾಡಿದ್ದಾರೆ. ಜಾತಿಗಣತಿ ಗೊಂದಲಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಟೇಬಲ್ ಕುಟ್ಟಿ ಸಿಟ್ಟು ಹೊರಹಾಕಿದ್ದಾರೆ ಎನ್ನಲಾಗಿದೆ.
ಕುರುಬ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್ ಎಂಬ ದ್ವಿಗುರುತು ಹೊಂದಿರುವ ಜಾತಿಗಳ ಬಗ್ಗೆ, ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಜೊತೆಗೆ ಎಸ್ಟಿ ಪಟ್ಟಿಗೆ ಕುರುಬ ಸೇರ್ಪಡೆ ಬಗ್ಗೆಯೂ ವಿರೋಧ ವ್ಯಕ್ತವಾಗಿದೆ. ಒಂದು ಹಂತದಲ್ಲಿ ಸಚಿವರ ಸಿಟ್ಟು ನೋಡಿ ಸಿದ್ದರಾಮಯ್ಯ ಫುಲ್ ಶಾಕ್ ಆದ್ರು ಎನ್ನಲಾಗಿದೆ. ಕೆಲ ಹೊತ್ತು ಏನು ಮಾಡಬೇಕೆಂದು ತಿಳಿಯದೇ ಗೊಂದಲಕ್ಕೆ ಒಳಗಾದ ಸಿದ್ದರಾಮಯ್ಯ, ಕುಳಿತಿದ್ದ ಕುರ್ಚಿಯಿಂದಲೇ ಏಕಾಏಕಿ ಎದ್ದು ನಿಂತಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಕೂಡ, ಫುಲ್ ರಾಂಗ್ ಆಗಿದ್ರು. ಹಿಂದುಳಿದ ವರ್ಗಗಳ ಆಯೋಗದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಸಾಲು ಸಾಲು ಪ್ರಶ್ನೆಗಳನ್ನು ಕೇಳಿದ್ದಾರೆ. ಸಮೀಕ್ಷೆ ವೇಳೆ ಯಾವ ಜಾತಿ ಬೇಕಾದ್ರೂ ನಮೂದಿಸಬಹುದಾ? ನಾಳೆ ಒಕ್ಕಲಿಗ ಶಿವಕುಮಾರ್ ಅಂತಾ ಬರೆಸಿದ್ರೆ ಪರಿಗಣಿಸ್ತೀರಾ? ಲಿಂಗಾಯತ ಶಿವಕುಮಾರ್ ಅಂತಾ ಬರೆಸಿದ್ರೆ ಏನ್ ಮಾಡ್ತೀರಾ? ಅಂತಾ ಪ್ರಶ್ನಿಸಿದ್ದಾರೆ.
ನಮಗೇನು ಇಂದೇ ಸಮೀಕ್ಷೆ ಮಾಡಬೇಕು ಎನ್ನುವುದಿಲ್ಲ. ಬೇಕಿದ್ದರೆ ಡಿಸೆಂಬರ್ಗೆ ಸಮೀಕ್ಷೆ ಮಾಡಿ. ರಾಜಕೀಯವಾಗಿ ನಮಗೆ ಅನ್ಯಾಯ ಆಗುತ್ತೆ ಹೀಗಾಗಿಯೇ ಕಾಂತರಾಜು ವರದಿ ತಿರಸ್ಕಾರ ಮಾಡಿದ್ವಿ. ಮತ್ತೆ ಅದನ್ನೇ ತಂದು ಇಲ್ಲಿ ಕೊಡುವುದಾದ್ರೆ ಉದ್ದೇಶ ಏನು ಅಂತಾ ಗರಂ ಆಗಿದ್ರು. ಇದೇ ವೇಳೆ ಹೆಚ್.ಕೆ. ಪಾಟೀಲ್ ಕೂಡ, ಅಧಿಕಾರಿಗಳನ್ನು ವಿರುದ್ಧ ಕಿಡಿಕಾರಿದ್ದಾರೆ. ಯಾವ ಆಧಾರದ ಮೇಲೆ 331 ಹೆಚ್ಚುವರಿ ಜಾತಿ ಸೇರಿಸಿದ್ದೀರಿ ಅಂತಾ ಪ್ರಶ್ನಿಸಿದ್ದಾರೆ.
ಇದೀಗ, ಎಲ್ಲರ ವಿರೋಧಕ್ಕೆ ಮಣಿದ ರಾಜ್ಯ ಸರ್ಕಾರ, ಸಮೀಕ್ಷೆಯಲ್ಲಿ ವಿವಾದಿತ ಜಾತಿಗಳನ್ನು ಕೈಬಿಡಲು ನಿರ್ಧಾರ ಮಾಡಿದೆಯಂತೆ. ಈ ಬಗ್ಗೆ ನಿನ್ನೆಯೇ ಹಿಂದುಳಿದ ಆಯೋಗಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ. ಜೊತೆಗೆ ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆಸಲಾಗ್ತಿದೆ.
ಜಾತಿ ಗೊಂದಲಗಳ ಬಗ್ಗೆ ಹೈವೋಲ್ಟೇಜ್ ಮೀಟಿಂಗ್ ಕರೆಯಲಾಗಿದ್ದು, ಕಾವೇರಿ ನಿವಾಸದಲ್ಲಿ ಸಂಪುಟ ಸಹೋದ್ಯೋಗಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಹೆಚ್ಚುವರಿ ಜಾತಿ ತೆಗೆದು ಸಮೀಕ್ಷೆ ಮುಂದುವರಿಕೆ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ. ಸೆಪ್ಟೆಂಬರ್ 22ರ ಬದಲು ಜಾತಿ ಮರುಗಣತಿಯನ್ನು ಮುಂದೂಡಿಕೆ ಮಾಡಲಾಗುತ್ತಾ ಕಾದು ನೋಡಬೇಕು.

