ತುಮಕೂರಲ್ಲಿ ಒಕ್ಕಲಿಗರ ಒಗ್ಗಟ್ಟು ಪ್ರದರ್ಶನ

ರಾಜ್ಯದೆಲ್ಲೆಡೆ ಜಾತಿಗಣತಿ ಭಾರೀ ಸದ್ದು ಮಾಡ್ತಿದೆ. ಎಲ್ಲಾ ಸಮುದಾಯಗಳು ನಿರಂತರ ಸಭೆಗಳನ್ನು ಮಾಡ್ತಿದ್ದು, ಜಾತಿ ಗಣತಿ ನೆಪದಲ್ಲಿ ಒಗ್ಗಟ್ಟು ಪ್ರದರ್ಶಿಸುತ್ತಿದ್ದಾರೆ. ಸೆಪ್ಟೆಂಬರ್‌ 20ರಂದು ಬೆಂಗಳೂರಿನಲ್ಲಿ ಒಕ್ಕಲಿಗ ಸಮುದಾಯದ, ಮಹತ್ವದ ಸಭೆ ಕರೆಯಲಾಗಿದೆ.

ಆದಿಚುಂಚನಗಿರಿ ಮಠದಲ್ಲಿ ನಿರ್ಮಲಾನಂಧನಾಥ ಸ್ವಾಮೀಜಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಇದರಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಭಾಗಿಯಾಗಲಿದ್ದಾರೆ. ಪಕ್ಷಾತೀತವಾಗಿ ಸಮಾಜದ ಮುಖಂಡರು ಕೂಡ ಬರ್ತಿದ್ದಾರೆ. ಒಕ್ಕಲಿಗರ ಸಭೆ ಬಗ್ಗೆ ಕುಣಿಗಲ್‌ ಶಾಸಕ ಹೆಚ್‌.ಡಿ. ರಂಗನಾಥ್‌ ಮಾಹಿತಿ ನೀಡಿದ್ದಾರೆ.

ಸೆಪ್ಟೆಂಬರ್‌ 19ರ ಶುಕ್ರವಾರ ಕೂಡ, ತುಮಕೂರಿನಲ್ಲಿ ಒಕ್ಕಲಿಗ ಸಮುದಾಯದವರು ಒಗ್ಗಟು ಪ್ರದರ್ಶಿಸಿದ್ದಾರೆ. ತಮ್ಮ ಉಪ ಜಾತಿ, ಉಪ ಪಂಗಡಗಳನ್ನು ಮರೆತು, ಒಟ್ಟಾಗಿ ಸಾಗುವ ಬಗ್ಗೆ ಸಮುದಾಯದ ಸ್ವಾಮೀಜಿಗಳು ಮತ್ತು ಮುಖಂಡರ ಸಭೆಯಲ್ಲಿ ನಿರ್ಧರಿಸಲಾಗಿದೆ. ಜಾತಿ ಜನಗಣತಿ ಸಮಯದಲ್ಲಿ ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದೇ ಬರೆಸುವಂತೆ ಸಲಹೆ ನೀಡಿದ್ದಾರೆ. ಇದಕ್ಕೆ ಸಭೆಯಲ್ಲಿ ಸಹಮತ ವ್ಯಕ್ತವಾಗಿದೆ.

ಸ್ಪಟಿಕಪುರಿ ಮಹಾಸಂಸ್ಥಾನ ಮಠದ ನಂಜಾವಧೂತ ಸ್ವಾಮೀಜಿ, ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನಾನಂದನಾಥ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಠದ ನಿಶ್ಚಲಾನಂದನಾಥ ಸ್ವಾಮೀಜಿ, ಕುಣಿಗಲ್‌ ಶಾಸಕ ಹೆಚ್‌.ಡಿ. ರಂಗನಾಥ್‌, ಸಮುದಾಯದ ಇತರೆ ಮುಖಂಡರ ನೇತೃತ್ವದಲ್ಲಿ, ಒಕ್ಕಲಿಗರ ಜಾಗೃತಿ ಸಭೆಯನ್ನು ನಡೆಸಲಾಗಿದೆ.

ಈ ಹಿಂದಿನ ಕಹಿ ಘಟನೆಗಳನ್ನು ಮರೆತು ಒಗ್ಗೂಡುವಂತೆ ಸಲಹೆ ನೀಡಿದ್ದಾರೆ.ಒಕ್ಕಲಿಗರು ಒಗ್ಗಟ್ಟಾಗಬೇಕಿದೆ. ಒಗ್ಗಟ್ಟಾಗಿ ಹೋಗದಿದ್ರೆ ಮುಂದಿನ ದಿನಗಳಲ್ಲಿ ನಮ್ಮ ಶಕ್ತಿ ಕ್ಷೀಣಿಸಲಿದೆ. ನಮ್ಮಲ್ಲಿರುವ ಉಪ ಜಾತಿಗಳನ್ನು ಇಟ್ಟುಕೊಂಡೇ ಒಕ್ಕಲಿಗೆ ವಿಚಾರದಲ್ಲಿ ಒಟ್ಟಾಗಬೇಕು. ಈಗಾಗಲೇ ಸಮುದಾಯದವರು ಸಂಘಟಿತರಾಗದೇ ಸಾಕಷ್ಟು ನೋವು, ಸಂಕಷ್ಟಗಳನ್ನು ಎದುರಿಸುವಂತಾಗಿದೆ. ಮುಂದಿನ ದಿನಗಳಲ್ಲಿ ಒಂದಾದರೆ ಮಾತ್ರ ನಮ್ಮ ಶಕ್ತಿ ಉಳಿಯಲು ಸಾಧ್ಯ. ಹೀಗಂತ ಒಕ್ಕಲಿಗರ ಸಂಘ ಹಾಗೂ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಕರೆ ಕೊಟ್ಟಿದೆ.

About The Author