ರಾಜ್ಯದ ರಾಜಕೀಯದಲ್ಲಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರ ಹೇಳಿಕೆ ಹೊಸ ಚರ್ಚೆ ಹುಟ್ಟುಹಾಕಿದ್ದು, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತೀವ್ರ ಟೀಕೆ ಮಾಡಿದ್ದಾರೆ. ಸಿದ್ದರಾಮಯ್ಯ ಸರ್ಕಾರಕ್ಕೆ ಕೊನೆಯ ಮೊಳೆ ಯತೀಂದ್ರ ಅವರಿಂದಲೇ ಬಿದ್ದಿದೆ ಎಂದು ವ್ಯಂಗ್ಯವಾಡಿದ ಅವರು, ಕಾಂಗ್ರೆಸ್ ಸರ್ಕಾರ ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕುಂಠಿತಗೊಳಿಸಿದೆ. ರಸ್ತೆ ಗುಂಡಿ ಮುಚ್ಚಲೂ ಆಗುತ್ತಿಲ್ಲ, ಆದರೆ ಸರ್ಕಾರದಲ್ಲೇ ದೊಡ್ಡ ಗುಂಡಿ ಬಿದ್ದಿದೆ ಎಂದು ಕಟುವಾಗಿ ಪ್ರತಿಕ್ರಿಯಿಸಿದರು.
ನಾಯಕರು ಮಕ್ಕಳಾದ ಯತೀಂದ್ರ ಮತ್ತು ಪ್ರಿಯಾಂಕ್ ಖರ್ಗೆ ಅವರು ಕಾಂಗ್ರೆಸ್‌ಗೆ ಗುಂಡಿ ತೋಡುತ್ತಿದ್ದಾರೆ. ತಮ್ಮ ತಂದೆಯವರನ್ನೇ ಅಪಮಾನಗೊಳಿಸುವಂತೆ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಮಹಿಳೆಯರ ಮೇಲಿನ ಅತ್ಯಾಚಾರ, ಕೊಲೆಗಳು, ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ವಿಷಯಗಳ ಬಗ್ಗೆ ಪ್ರಶ್ನಿಸಿದರೆ, ಕಾಂಗ್ರೆಸ್ ನಾಯಕರು ದಾರಿ ತಪ್ಪಿಸುವ ಉತ್ತರ ಕೊಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರ ಜನರ ಸಮಸ್ಯೆ ಪರಿಹಾರಕ್ಕಾಗಿ ಬಂದಿದೆಯೋ ಅಥವಾ ಹೊಸ ಸಮಸ್ಯೆಗಳನ್ನು ಸೃಷ್ಟಿಸಲು ಅಧಿಕಾರಕ್ಕೇರಿದೆಯೋ ಅರ್ಥವಾಗುತ್ತಿಲ್ಲ. ಜನರು ಹಿಡಿಶಾಪ ಹಾಕುತ್ತಿದ್ದಾರೆ, ಆದರೆ ಸರ್ಕಾರ ಕಾಲಹರಣ ಮಾಡುತ್ತಿದೆ. ಈ ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ಮಾರಕವಾಗಿದೆ ಎಂದು ಆಕ್ರೋಶ ಹೊರಹಾಕಿದರು.
ತಮ್ಮ ತಂದೆ ರಾಜಕೀಯ ಜೀವನದ ಕೊನೆಯ ಹಂತದಲ್ಲಿದ್ದಾರೆ, ಮುಂದಿನ ನಾಯಕತ್ವ ಸತೀಶ್ ಜಾರಕಿಹೊಳಿ ವಹಿಸಬೇಕು ಎಂದು ಯತೀಂದ್ರ ಹೇಳಿದ್ದಾರೆ. ಇದು ಪಕ್ಷದ ಅಧಿಕೃತ ನಿಲುವೇ? ಅಥವಾ ತಂದೆಯ ರಾಜಕೀಯ ಅಂತ್ಯಕ್ಕೆ ಮಗನ ಕೈಯಿಂದಲೇ ಕೊನೆಯ ಮೊಳೆ ಬಿದ್ದಿತೆ? ಎಂದರು. ಜೊತೆಗೆ, ಪ್ರಿಯಾಂಕ್ ಖರ್ಗೆ ಉಪಮುಖ್ಯಮಂತ್ರಿಯಾಗಲು ಆತುರದಿಂದ ಕೆಲಸ ಮಾಡುತ್ತಿದ್ದಾರೆ, ತಮ್ಮ ಇಲಾಖೆಯನ್ನು ಕಡೆಗಣಿಸಿ ಬೇರೆ ವಿಚಾರಗಳಲ್ಲಿ ಆರ್ಭಟಿಸುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬಾರದು ಎಂದು ಸಿದ್ದರಾಮಯ್ಯ ಮತ್ತು ಮಹದೇವಪ್ಪ ಅವರೇ ಅಡ್ಡಿಯಾದರು ಎಂದು ಗಂಭೀರ ಆರೋಪವನ್ನೂ ಹೊರಹಾಕಿದರು.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ