ಪಾಕಿಸ್ತಾನ: ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳ ನಡುವಿನ ಗಡಿ ಬಂದ್ ಪರಿಣಾಮವಾಗಿ ತರಕಾರಿಗಳು ಹಾಗೂ ಹಣ್ಣುಗಳ ಬೆಲೆ ಗಗನಕ್ಕೇರಿವೆ. ವಿಶೇಷವಾಗಿ, ಟೊಮೇಟೊ ಬೆಲೆಗಳು ಕಳೆದ ಕೆಲವು ವಾರಗಳಲ್ಲಿ ಶೇ.400ರಷ್ಟು ಏರಿಕೆ ಕಂಡು, ದೇಶದ ಮಾರುಕಟ್ಟೆಗಳಲ್ಲಿ ತೀವ್ರ ಬೆಲೆ ಏರಿಕೆಯನ್ನು ಉಂಟುಮಾಡಿವೆ.
ವರದಿಯ ಪ್ರಕಾರ, ಪಾಕಿಸ್ತಾನ ಮಾರುಕಟ್ಟೆಯಲ್ಲಿ ಟೊಮೆಟೊ ಪ್ರತಿ ಕಿಲೋಗ್ರಾಂಗೆ ಪಾಕಿಸ್ತಾನದಲ್ಲಿ 600ರ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಲಾಹೋರ್ ಮತ್ತು ಕರಾಚಿ ಸೇರಿದಂತೆ ಹಲವಾರು ಪ್ರಮುಖ ನಗರಗಳಲ್ಲಿ, ಟೊಮೇಟೊ ಬೆಲೆ ಪ್ರತಿ ಕಿಲೋಗ್ರಾಂಗೆ 700 ರೂ. ತಲುಪಿದೆ. ಕೆಲವೇ ದಿನಗಳ ಹಿಂದೆ ಈ ಬೆಲೆ ಕೇವಲ 100 ರೂ.ಗಳಷ್ಟೇ ಇತ್ತು.
ಅಕ್ಟೋಬರ್ 11 ರಿಂದ ಪಾಕ್–ಅಫ್ಘಾನ್ ಗಡಿ ಮುಚ್ಚಲ್ಪಟ್ಟಿದೆ. ಅದರ ಬಳಿಕ ಎರಡೂ ದೇಶಗಳ ಮಧ್ಯೆ ವ್ಯಾಪಾರ ಸಂಪೂರ್ಣ ಸ್ಥಗಿತಗೊಂಡಿದೆ. ಅಫ್ಘಾನಿಸ್ತಾನದ ಗಡಿಯುದ್ದಕ್ಕೂ ಉಂಟಾದ ಮಿಲಿಟರಿ ಸಂಘರ್ಷ ಮತ್ತು ಪಾಕಿಸ್ತಾನದ ವಾಯುದಾಳಿಗಳ ಬಳಿಕ ತಾಲಿಬಾನ್ ಸರ್ಕಾರ ತೀವ್ರ ಪ್ರತಿಕ್ರಿಯೆ ನೀಡಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಪ್ರಸ್ತುತ, ಕದನ ವಿರಾಮಕ್ಕೆ ಒಪ್ಪಂದವಾದರೂ, ದ್ವಿಪಕ್ಷೀಯ ವ್ಯಾಪಾರ ಇನ್ನೂ ಸ್ಥಗಿತಗೊಂಡಿದೆ. ಇದರಿಂದಾಗಿ ಪಾಕಿಸ್ತಾನದಲ್ಲಿ ತರಕಾರಿಗಳು ಮತ್ತು ಹಣ್ಣುಗಳ ಕೊರತೆ ಉಂಟಾಗಿದೆ. ಇರಾನಿನಿಂದ ಸೀಮಿತ ಪ್ರಮಾಣದ ಟೊಮೆಟೊ ಪೂರೈಕೆ ಆಗುತ್ತಿದ್ದರೂ, ಅದು ಸ್ಥಳೀಯ ಬೇಡಿಕೆಗೆ ತಕ್ಕಂತೆ ಇಲ್ಲ. ಲಾಹೋರ್‌ನಲ್ಲಿ, ಅಧಿಕೃತ ದರ 175ರೂ., ಆದರೆ ಮಾರುಕಟ್ಟೆಯಲ್ಲಿ ಟೊಮೆಟೊವನ್ನು ಪ್ರತಿ ಕಿಲೋಗ್ರಾಂಗೆ 400ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳ ವಾರ್ಷಿಕ ವ್ಯಾಪಾರ ಮೌಲ್ಯ ಸುಮಾರು 2.3 ಬಿಲಿಯನ್ ಡಾಲರ್‌ಗಳಷ್ಟಿದೆ. ಈ ವ್ಯಾಪಾರದಲ್ಲಿ ಹಣ್ಣುಗಳು, ತರಕಾರಿಗಳು, ಗೋಧಿ, ಅಕ್ಕಿ, ಸಕ್ಕರೆ, ಮಾಂಸ, ಡೈರಿ ಉತ್ಪನ್ನಗಳು ಹಾಗೂ ಔಷಧಿಗಳು ಪ್ರಮುಖ ಸ್ಥಾನದಲ್ಲಿವೆ. ಗಡಿ ಬಂದ್‌ನ ಪರಿಣಾಮವಾಗಿ ಈ ಉತ್ಪನ್ನಗಳ ಬೆಲೆಗಳು ಮುಂದಿನ ವಾರಗಳಲ್ಲಿ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ವರದಿ : ಲಾವಣ್ಯ ಅನಿಗೋಳ

