ಬೆಂಗಳೂರು: ಸುಪ್ರೀಂಕೋರ್ಟ್ ಸೂಚನೆಯಂತೆ ಸ್ಪೀಕರ್ ಭೇಟಿಯಾಗಲು ಮುಂಬೈನಿಂದ ಬೆಂಗಳೂರಿಗೆ ಹಾಜರಾಗಿದ್ದ ಅತೃಪ್ತ ಶಾಸಕರಿಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಕುರಿತು ಸ್ಪೀಕರ್ ಗೃಹಸಚಿವ ಎಂ.ಬಿ ಪಾಟೀಲರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಧಾನಸಭೆಯಲ್ಲಿಂದು ಅತೃಪ್ತ ಶಾಸಕರು ಸ್ಪೀಕರ್ ಭೇಟಿಯಾಗಲು ಬಂದಿದ್ದಾಗ ಕಲ್ಪಿಸಲಾಗಿದ್ದ ಜೀರೋ ಟ್ರಾಫಿಕ್ ವ್ಯವಸ್ಥೆ ಕುರಿತು ಜೆಡಿಎಸ್ ಶಾಸಕ ಎ.ಟಿ ರಾಮಸ್ವಾಮಿ ಸದನದ ಗಮನ ಸೆಳೆದರು. ಈ ಕುರಿತು ಗೃಹಸಚಿವರಿಗೆ ರಾಮಸ್ವಾಮಿ ಅತೃಪ್ತ ಶಾಸರಿಗೆ ಎಚ್ಎಎಲ್ ವಿಮಾನ ನಿಲ್ದಾಣದಿಂದ ಜೀರೋ ಟ್ರಾಫಿಕ್ ವ್ಯವಸ್ಥೆ ಕೊಟ್ಟಿದ್ರಾ ಅಂತ ಪ್ರಶ್ನೆ ಕೇಳಿದ್ರು. ಈ ವೇಳೆ ಉತ್ತರಿಸಿದ ಪಾಟೀಲ್ ಇಲ್ಲ ಅವರಿಗೆ ಜೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಲಾಗಿರಲಿಲ್ಲ ಎಂದರು. ಇದಕ್ಕೆ ಕೆಂಡಾಮಂಡಲರಾದ ಸ್ಪೀಕರ್ ರಮೇಶ್ ಕುಮಾರ್, ಗೃಹ ಸಚಿವರಾಗಿದ್ದುಕೊಂಡು ನಿಮಗೇ ಮಾಹಿತಿ ಇಲ್ಲದಿದ್ದರೆ ಹೇಗೆ, ಅವರಿಗೆ ಜೀರೋ ಟ್ರಾಫಿಕ್ ಕಲ್ಪಿಸಿದ್ದನ್ನು ಇಡೀ ದೇಶವೇ ನೋಡಿದೆ ಅಂತ ಸ್ಪೀಕರ್ ಸಿಡಿಮಿಡಿಗೊಂಡರು.
ಅಲ್ಲದೆ ನೀವು ಹೇಳಿದ ಮಾತು ನಿಮ್ಮ ಆತ್ಮಸಾಕ್ಷಿ ಒಪ್ಪುತ್ತಾ ಅಂತ ಮತ್ತೆ ಗೃಹಸಚಿವರನ್ನು ಕೇಳಿದಾಗ ಅವರು ತಡಬಡಾಯಿಸಿದರು. ಹೀಗಾಗಿ ಸ್ಪೀಕರ್ ಪುನಃ, ಗೃಹ ಇಲಾಖೆ ಕೊಟ್ಟಿದೆಯೋ ಇಲ್ಲವೋ ಅಷ್ಟು ಮಾತ್ರ ಹೇಳಿ ಅಂತ ಗರಂ ಆದ್ರು. ಮತ್ತೆ ತಮ್ಮ ಮಾತು ಮುಂದುವರಿಸಿದ ಸ್ಪೀಕರ್, ಕೊಡಿ, ಇನ್ನೂ ಅಪರಾಧಿಗಳಿಗೆಲ್ಲಾ ರಕ್ಷಣೆ ಕೊಡಿ, ದೇಶಕ್ಕಾಗಿ ಪ್ರಾಣ ಬಿಟ್ಟವರಿಗೆ, ಸಮಾಜ ಸೇವೆ ಮಾಡಿದವರಿಗೆ ಕೊಡಬೇಡಿ ಅಂತ ಕೆಂಡಾಮಂಡಲರಾದ್ರು. ಇನ್ನು ಇಂತಹ ಕೆಲಸ ಮಾಡಿದ್ರೆ ಸಮಾಜವನ್ನು ಹೇಗೆ ಮುಂದಕ್ಕೆ ನಡೆಸ್ತೀರಾ ಅಂತ ಪ್ರಶ್ನಿಸಿದ್ರು.