ಬೆಂಗಳೂರು: ವಿಶ್ವಾಸಮತ ಯಾಚನೆ ಕುರಿತಾಗಿ ತಮ್ಮನ್ನು ಭೇಟಿಯಾಗಿದ್ದ ಸಿಎಂ ನಿಯೋಗಕ್ಕೆ ವಿಧಾನಸಭಾ ಸ್ಪೀಕರ್ ರಮೇಶ್ ಕುಮಾರ್ ಇನ್ನು ವಿಳಂಬ ಮಾಡೋದಕ್ಕೆ ಆಗೋದಿಲ್ಲ ಅಂತ ಖಡಕ್ ಉತ್ತರ ನೀಡಿದ್ದಾರೆ. ಹೀಗಾಗಿ ಇಂದು ವಿಶ್ವಾಸಮತ ಯಾಚನೆ ನಡೆಯಲಿದೆಯಾ ಅನ್ನೋದು ಸದ್ಯಕ್ಕೆ ಕುತೂಹಲ ಮೂಡಿಸಿದೆ.
ವಿಧಾನಸಭಾ ಕಲಾಪದ ಮಹತ್ವದ ದಿನವಾದ ಇಂದು, ಸಿಎಂ ಕುಮಾರಸ್ವಾಮಿ, ಪ್ರಿಯಾಂಕ್ ಖರ್ಗೆ, ಎಚ್.ಡಿ ರೇವಣ್ಣ ಮತ್ತು ಕೃಷ್ಣ ಭೈರೇಗೌಡ ಸ್ಪೀಕರ್ ರಮೇಶ್ ಕುಮಾರ್ ರನ್ನು ಭೇಟಿಯಾಗಿದ್ರು. ಶುಕ್ರವಾರದ ಕಲಾಪದಲ್ಲಿ ಸೋಮವಾರ ವಿಶ್ವಾಸಮತ ಯಾಚನೆ ನಡೆಸಲಾಗುತ್ತೆ ಅಂತ ಭರವಸೆ ನೀಡಿದ್ದ ಸ್ಪೀಕರ್ ಹೇಳಿದ್ದ ದಿನ ಬರುತ್ತಿದ್ದಂತೆ ದೋಸ್ತಿಗಳಿಗೆ ತಲೆ ಬಿಸಿ ಶುರುವಾಗಿದೆ. ಹೀಗಾಗಿ ಸಿಎಂ ನಿಯೋಗ, ವಿಶ್ವಾಸ ಮತ ಯಾಚನೆಗೆ ಇನ್ನೆರಡು ದಿನ ಕಾಲಾವಕಾಶ ನೀಡಿ ಅಂತ ಮನವಿ ಮಾಡಿತು. ಆದರೆ ಇದಕ್ಕೆ ಉತ್ತರಿಸಿದ ಸ್ಪೀಕರ್, ಇಷ್ಟು ದಿನ ವಿಳಂಬ ಮಾಡಿದ್ದೇ ಹೆಚ್ಚಾಗಿದೆ. ಇನ್ನು ವಿಳಂಬ ಮಾಡಲು ಅಸಾಧ್ಯ ಅಂತ ಹೇಳಿದ್ದಾರೆ ಎನ್ನಲಾಗಿದೆ.
ಸದನದಲ್ಲಿ ಇನ್ನಷ್ಟು ಮಂದಿ ದೋಸ್ತಿ ಸದಸ್ಯರು ಮಾತನಾಡಲು ಈಗಾಗಲೇ ಅವಕಾಶ ಕೋರಿದ್ದ ದೋಸ್ತಿ ನಾಯಕರು ಇವತ್ತೂ ಸಹ ಚರ್ಚೆಯಲ್ಲೇ ಕಾಲಹರಣ ಮಾಡುವ ಯತ್ನ ನಡೆಸಿದ್ದಾರೆ. ಆದರೆ ವಿಶ್ವಾಸಮತ ವಿಳಂಬ ಮಾಡೋದು ಅಸಾಧ್ಯ ಅಂತಷ್ಟೇ ಹೇಳಿರುವ ಸ್ಪೀಕರ್, ಸದನದಲ್ಲಿ ಯಾವ ನಿರ್ಧಾರ ತೆಗೆದುಕೊಳ್ತಾರೆ ಅನ್ನೋದನ್ನು ಕಾದುನೋಡಬೇಕಿದೆ.