ಕನ್ನಡ ಚಿತ್ರರಂಗದ ಜನಪ್ರಿಯ ನಟರಲ್ಲಿ ವಿಜಯ್ ರಾಘವೇಂದ್ರ ಕೂಡ ಒಬ್ಬರು. ಇವರು ಚಿನ್ನಾರಿ ಮುತ್ತ, ಚಲಿಸುವ ಮೋಡಗಳು, ಅಂಬಿಕಾ ಎಂಬ ಸಿನಿಮಾಗಳಲ್ಲಿ ಬಾಲ ನಟರಾಗಿ ನಟಿಸಿ ಅತ್ಯುತ್ತಮ ಬಾಲ ನಟ ಎಂದು ಖ್ಯಾತಿ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಬಾಲನಟನಾಗಿ ನಟಿಸಿ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ.
ವಿಜಯ್ ರಾಘವೇಂದ್ರ ರವರು 2002 ರಲ್ಲಿ ಬಿಡುಗಡೆಯಾದ “ನಿನಗಾಗಿ” ಸಿನಿಮಾದ ಮೂಲಕ ಮೊದಲ ಬಾರಿಗೆ ನಾಯಕರಾಗಿ ನಟಿಸಿ ಕನ್ನಡ ಸಿನಿರಂಗದಲ್ಲಿ ಗುರುತಿಸಿಕೊಂಡರು. ನಂತರ “ಸೇವಂತಿ ಸೇವಂತಿ, ರಿಷಿ, ಖುಷಿ, ಕಲ್ಲರಳಿ ಹೂವಾಗಿ, ಹೀಗೆ ಹಲವು ಚಿತ್ರಗಳಲ್ಲಿ ನಾಯಕನಾಗಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಸೈ ಎನಿಸಿಕೊಂಡಿದ್ದಾರೆ.
ಇದೀಗ ವಿಜಯ್ ರಾಘವೇಂದ್ರ ಅವರು ಹೊಸ ಸಿನಿಮಾ ಒಂದನ್ನ ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ‘ರಾಘು’ ಎಂದು ಹೆಸರನ್ನ ಇಡಲಾಗಿದೆ. ಅಂದಹಾಗೆ, ಈ ಸಿನಿಮಾಗೆ ‘ರಾಘು ಎಂಬ ಟೈಟಲ್ ಇಡಲು ಸಲಹೆ ನೀಡಿದ್ದೇ ವಿಜಯ್ ರಾಘವೇಂದ್ರ ಅವರಂತೆ. ಇತ್ತೀಚಿಗೆ ಈ ಚಿತ್ರಕ್ಕೆ ಮುಹೂರ್ತ ನೆರವೇರಿದ್ದು, ಸಿನಿಮಾದ ಮೊದಲ ದೃಶ್ಯಕ್ಕೆ ನಟ ಶ್ರೀಮುರಳಿ ಕ್ಲ್ಯಾಪ್ ಮಾಡಿ, ‘ಈ ಸಿನಿಮಾ ಕೂಡ ಉತ್ತಮ ರೀತಿಯಲ್ಲಿ ಮೂಡಿ ಬರಲಿ’ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ವಿಜಯ್ ರಾಘವೇಂದ್ರ ಅವರನ್ನು ಕನ್ನಡ ಚಿತ್ರರಂಗದ ಸ್ನೇಹಿತರು ಪ್ರೀತಿಯಿಂದ ರಾಘು ಎಂದೇ ಕರೆಯುತ್ತಾರೆ. ಇದೀಗ ಆ ಹೆಸರೇ ಟೈಟಲ್ ಆಗಿ ಮೂಡಿಬಂದಿದೆ. ಸ್ವಲ್ಪ ದಿನಗಳ ಹಿಂದಷ್ಟೇ ರಾಘು ಸಿನಿಮಾದ ಟೈಟಲ್ ಲಾಂಚ್ ಆಗಿತ್ತು. ಇದೀಗ ‘ರಾಘು’ ಸಿನಿಮಾದ ಮುಹೂರ್ತ ಬೆಂಗಳೂರಿನ ರಾಮಾಂಜನೇಯ ಗುಡ್ಡದ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮುರಳಿ, ‘ಈ ಸಿನಿಮಾದ ಟೈಟಲ್ ತುಂಬಾ ಚೆನ್ನಾಗಿದೆ. ಅದು ನನಗೆ ಬಹಳ ಇಷ್ಟವಾಯಿತು. ಇಡೀ ತಂಡ ತುಂಬ ಉತ್ಸಾಹದಿಂದ ಕೂಡಿದೆ. ಈ ಸಿನಿಮಾದಿಂದ ನಮ್ಮಣ್ಣನಿಗೆ ಒಳ್ಳೆಯದಾಗಲಿ. ಒಳ್ಳೊಳ್ಳೆಯ ಸಿನಿಮಾಗಳನ್ನು ಮಾಡಿದಾಗ ಅಭಿಮಾನಿ ದೇವರುಗಳು ಯಾವಾಗಲೂ ಇಷ್ಟಪಡುತ್ತಾರೆ. ಈ ಸಿನಿಮಾ ಕೂಡ ಉತ್ತಮ ರೀತಿಯಲ್ಲಿ ಮೂಡಿಬರಲಿ. ಇಡೀ ತಂಡಕ್ಕೆ ಶುಭವಾಗಲಿ’ ಎಂದು ಹಾರೈಸಿದರು.
ನಂತರ ವಿಜಯ್ ರಾಘವೇಂದ್ರ ಮಾತನಾಡಿದ್ದು, ‘ಎಲ್ಲರೂ ಪ್ರೀತಿಯಿಂದ ಬಂದಿರುವುದು ನನಗೆ ತುಂಬ ಖುಷಿ ನೀಡಿದೆ. ನನ್ನ ಈ ಆಕ್ಷನ್ ಥ್ರಿಲ್ಲರ್ ಸಿನಿಮಾಗೆ ಶುಭ ಹಾರೈಸುವುದಕ್ಕೆ ನನ್ನ ತಮ್ಮ ಶ್ರೀಮುರಳಿ ಬಂದಿದ್ದಾರೆ. ನಮ್ಮ ತಂಡದ ಮೇಲೆ ನಿಮ್ಮ ಸಹಕಾರ ಇರಲಿ’ ಎಂದರು.
ಆನಂದ್ ರಾಜ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ‘ಇದೊಂದು ಪ್ರಯೋಗಾತ್ಮಕ ಸಿನಿಮಾವಾಗಿದ್ದು ವಿಜಯ್ ರಾಘವೇಂದ್ರ ಅವರಿಗೆ ನಾನು ಕಥೆ ಹೇಳಿದ ಮರುಕ್ಷಣವೇ ಅವರು ಒಪ್ಪಿಕೊಂಡು ಡೇಟ್ಸ್ ಕೊಟ್ಟರು. ಇಷ್ಟು ವೈಲೆಂಟ್ ಆಗಿರುವ ಪಾತ್ರವನ್ನು ಹಿಂದೆ ಎಲ್ಲಿಯೂ ನಿರ್ವಹಿಸಿಲ್ಲ ಎಂದೂ ಅವರು ಹೇಳಿದರು. ಪ್ರೇಕ್ಷಕರಿಗೂ ವಿಜಯ್ ರಾಘವೇಂದ್ರ ಎಷ್ಟು ರಗಡ್ ಆಗಿ ನಟಿಸಿದ್ದಾರೆ ಎನಿಸಿ ಅಚ್ಚರಿಯಾಗುತ್ತದೆ. ವಿಜಯ್ ರಾಘವೇಂದ್ರ ಇದುವರೆಗೂ ಕಾಣಿಸಿಕೊಳ್ಳದ ಪಾತ್ರದಲ್ಲಿ ಇರಲಿದ್ದಾರೆ. ಇದೊಂದು ಥ್ರಿಲ್ಲರ್ ಎಕ್ಸ್‌ಪೆರಿಮೆಂಟಲ್ ಚಿತ್ರ. ಪ್ರತಿ ದೃಶ್ಯ ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸುತ್ತದೆ’ ಎಂದು ತಿಳಿಸಿದ್ದಾರೆ.
ಇನ್ನು ಈ ಸಿನಿಮಾಕ್ಕೆ ‘ಬ್ಯಾಂಗ್’, ‘ಫ್ಯಾಮಿಲಿ ಪ್ಯಾಕ್’ ಖ್ಯಾತಿಯ ಉದಯ್ ಲೀಲಾ ಛಾಯಾಗ್ರಹಣ ಮಾಡುತ್ತಿದ್ದು, ಸೂರಜ್ ಜೋಯಿಸ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಅಥರ್ವ್ ಆರ್ಯ ಸಂಭಾಷಣೆ ಬರೆಯುತ್ತಿದ್ದಾರೆ. ಇನ್ನು ಈ ಸಿನಿಮಾದ ಚಿತ್ರೀಕರಣ ಇದೇ ತಿಂಗಳಿನಲ್ಲಿ ಆರಂಭವಾಗಲಿದೆ.
ಪ್ರಾಕೃತಿ ಪ್ರಭಾಕರ್, ಕರ್ನಾಟಕ ಟಿವಿ, ಸಿನಿಮಾ ಬ್ಯುರೋ