ಸ್ಯಾಂಡಲ್‌ವುಡ್ ನಟಿ ರಮ್ಯಾ ಅವರು ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಅಂತ ಪೋಸ್ಟ್ ಮಾಡಿದ್ದು ಫ್ಯಾನ್ಸ್ ವಾರ್‌ಗೆ ಕಾರಣವಾಗಿದೆ. ಅದಕ್ಕೆ ಪ್ರತಿಯಾಗಿ ದರ್ಶನ್ ಅವರ ಕೆಲ ಅಭಿಮಾನಿಗಳು ರಮ್ಯಾಗೆ ಅಶ್ಲೀಲ, ಅಸಭ್ಯ ಸಂದೇಶಗಳನ್ನು ಕಳುಹಿಸಿದ್ರು. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗಿತ್ತು.
ಈ ಅಸಭ್ಯ ಸಂದೇಶಗಳನ್ನು ಕಂಡು ನಟ ಪ್ರಥಮ್, ಶಿವರಾಜ್ ಕುಮಾರ್, ವಿನಯ್ ರಾಜ್ ಕುಮಾರ್, ಯುವ ರಾಜ್ಕುಮಾರ್ ಮೊದಲಾದವರು ರಮ್ಯಾ ಪರವಾಗಿ ಧ್ವನಿ ಎತ್ತಿದ್ದಾರೆ. ಈ ಸಂದರ್ಭದಲ್ಲಿ ಯುವ ರಾಜ್ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ಮಾಡಿರುವ ಒಂದು ಪೋಸ್ಟ್ ಸದ್ಯ ಭಾರಿ ವೈರಲ್ ಆಗುತ್ತಿದೆ.
ರಮ್ಯಾ ಪರವಾಗಿ ವಿನಯ್ ರಾಜ್ಕುಮಾರ್ ಪೋಸ್ಟ್ ಮಾಡಿದ್ದು, ‘ಯಾವುದೇ ರೀತಿಯ ಕಿರುಕುಳದ ವಿರುದ್ಧ ನಿಲ್ಲುವುದು ನಮ್ಮ ಕರ್ತವ್ಯ. ಹೆಣ್ಮಕ್ಕಳನ್ನು ಕೀಳಾಗಿ ಕಾಣುವ ಪ್ರಪಂಚ, ಬೆಳವಣಿಗೆಗೂ ಮುನ್ನ ನಾಶವಾಗಬೇಕು’ ಅಂತ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದರು. ಬಳಿಕ ಶಿವರಾಜ್ಕುಮಾರ್ ಹಾಗೂ ಗೀತಾ ಶಿವರಾಜ್ಕುಮಾರ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ರಮ್ಯಾಗೆ ಬೆಂಬಲ ನೀಡಿದರು.
ಇದಕ್ಕೆಲ್ಲಾ ಪ್ರತಿಯಾಗಿ ಪೋಸ್ಟ್ ಮಾಡಿದ ಯುವ ರಾಜ್ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ, ಮಾಧ್ಯಮಗಳಲ್ಲಿ ಮಹಿಳೆಯರನ್ನು ಅವಮಾನಿಸುವುದರ ವಿರುದ್ಧ ಮಾತನಾಡುವುದು ನೋಡುವಾಗ, ತಮ್ಮ ಕುಟುಂಬದಲ್ಲೇ ಇದೆಲ್ಲ ನಡೆಯುವಾಗ ಮಾತಾಡದೇ ಸುಮ್ಮನೇ ಇದ್ರಲ್ಲ, ಆವಾಗ ನಿದ್ರೆ ಮಾಡ್ತಾ ಇದ್ರಾ ಎಲ್ಲ?’ ಎಂದು ಶ್ರೀದೇವಿ ಭೈರಪ್ಪ ಅವರು ಬರೆದುಕೊಂಡಿದ್ದಾರೆ. ಇದರ ಜೊತೆ ‘ಬೂಟಾಟಿಕೆ ವ್ಯಕ್ತಿಗಳು’ ಮತ್ತು ‘ಡ್ರಾಮಾ’ ಎಂಬ ಹ್ಯಾಶ್ ಟ್ಯಾಗ್ಗಳನ್ನು ಶ್ರೀದೇವಿ ಬಳಸಿದ್ದಾರೆ.
ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರು ಶೇರ್ ಮಾಡಿದ ಸಂದೇಶಗಳಲ್ಲಿ, ಯಾವ ಮಹಿಳೆಯನ್ನಾದರೂ ತಾಯಿಯಾಗಿ, ಮಗಳಾಗಿ, ವ್ಯಕ್ತಿಯಾಗಿ ಗೌರವಿಸುವುದು ಅತೀ ಮುಖ್ಯ ಅಂತ ಬರೆದುಕೊಂಡಿದ್ದಾರೆ. ಅವರ ನಿಲುವಿಗೆ ಹಲವರು ಬೆಂಬಲ ನೀಡಿದ್ದಾರೆ. ಆದರೆ ಈಗ ದರ್ಶನ್ ಅಭಿಮಾನಿಗಳು ತಿರುಗಿ ಶ್ರೀದೇವಿ ಭೈರಪ್ಪನ ಹೇಳಿಕೆಗೆ ಸ್ಪಂದನೆ ನೀಡುತ್ತಿದ್ದಾರೆ. ‘ನ್ಯಾಯ ಮನೆಯಿಂದಲೇ ಶುರುವಾಗಬೇಕು. ಶ್ರೀದೇವಿಗೆ ನ್ಯಾಯ ಸಿಗುತ್ತಾ?’ – ಎಂಬಂತೆ ಪೋಸ್ಟ್‌ಗಳು ವೈರಲ್ ಆಗುತ್ತಿವೆ.
ವರದಿ : ಲಾವಣ್ಯ ಅನಿಗೋಳ