ಹುಟ್ಟೂರು ಅಂದ್ರೆ ಸ್ವರ್ಗ, ಒಬ್ಬ ವ್ಯಕ್ತಿಯ ಮೂಲ, ಮನದಾಳದ ನೆಮ್ಮದಿ. ಈ ಮಾತು ಎಲ್ಲರಿಗೂ ಗೊತ್ತು. ಆದರೆ ಇದೇ ಹುಟ್ಟೂರನ್ನೇ ಬಿಟ್ಟು ಹೊರಟಿದ್ದಾರೆ ಕಾಲಿವುಡ್‌ನ ಸೂಪರ್ ಸ್ಟಾರ್ ತಲಾ ಅಜಿತ್ ಕುಮಾರ್. ಯಾಕೆ ಅಜಿತ್ ತಮ್ಮ ಸ್ವದೇಶವನ್ನು ಬಿಟ್ಟು ಹೊರಟಿದ್ದಾರೆ ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಮೂಡಿದೆ.
ಮಾಹಿತಿಯ ಪ್ರಕಾರ, ಅಜಿತ್ ಈಗ ಭಾರತದ ಪ್ರಜೆ ಅಲ್ಲ, ದುಬೈ ನಿವಾಸಿ. ಭಾರತದ ನಾಗರೀಕತೆಯನ್ನು ತ್ಯಜಿಸಿ, UAEಯಲ್ಲಿ ನೆಲೆಸಿದ್ದಾರೆ. ಸಿನಿಮಾಗಳ ಚಿತ್ರೀಕರಣ ಅಥವಾ ಬೇರೆ ಯಾವುದೇ ಕೆಲಸ ಇರುವಾಗ ಮಾತ್ರ ಭಾರತಕ್ಕೆ ಆಗಮಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.
ಭಾರತದಲ್ಲಿ ಹಲವು ಕಲಾವಿದರು ಖ್ಯಾತಿ ಪಡೆದ ನಂತರ ವಿದೇಶಗಳಲ್ಲಿ ನೆಲೆಸುವುದು ಹೊಸದೇನಲ್ಲ. ಈಗ ಆ ಸಾಲಿಗೆ ತಮಿಳು ಸೂಪರ್ ಸ್ಟಾರ್ ಅಜಿತ್ ಕೂಡ ಸೇರಿದ್ದಾರೆ. ಅಷ್ಟಕ್ಕೂ ತಲಾ ಅಜಿತ್ ಜೀವನ ಕೊಟ್ಟ ದೇಶ ಬಿಟ್ಟು ಪರದೇಶದ ನಾಗರೀಕನಾಗಿದ್ದೇಕೆ? ಅದಕ್ಕೆ ಕಾರಣ ಅಜಿತ್ ಅವರೇ ರಿವಿಲ್ ಮಾಡಿದ್ದಾರೆ.
ಅಜಿತ್ ಅವರ ಹೇಳಿಕೆಯ ಪ್ರಕಾರ, ಭಾರತದಲ್ಲಿ ಕಲಾವಿದರಿಗೆ ಅನಾವಶ್ಯಕ ಪ್ರಾಧಾನ್ಯತೆ, ಪ್ರಾಮುಖ್ಯತೆ ಸಿಗತ್ತೆ ಅನ್ನೋದು ಅವರ ಅಸಮಾಧಾನದ ಮೂಲ ಕಾರಣ. ಸಂದರ್ಶನಗಳನ್ನೇ ನೀಡದ, ಸಿನಿಮಾ ಪ್ರಚಾರಗಳನ್ನೂ ಮಾಡದ ಅಜಿತ್ ಇತ್ತೀಚೆಗಷ್ಟೆ ಹಾಲಿವುಡ್ ರಿಪೋರ್ಟರ್ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ಕೊಟ್ಟಿದ್ದಾರೆ.
ಅಲ್ಲಿ ಮಾತನಾಡುತ್ತಾ ನಟರುಗಳಿಗೆ ವಿಶೇಷ ಪ್ರಾಧಾನ್ಯತೆ ಭಾರತದಲ್ಲಿ ಸಿಗುತ್ತೆ. ಜನ ಬಂದು ಗದ್ದಲ ಮಾಡುತ್ತಾರೆ. ಅದೆಲ್ಲದರಿಂದ ದೂರಾಗಲೆಂದು ನಾನು ದೂರ ಹೋಗಿದ್ದೇನೆ. ಇದರಿಂದ ದೂರ ಹೋಗದೇ ಇದ್ದರೆ ನಾನೂ ಸಹ ಇಂಥಹ ಅನವಶ್ಯಕ ಪ್ರಾಮುಖ್ಯತೆಗೆ ಸಿಕ್ಕಿ ಬೀಳುತ್ತೇನೆ. ನಾನು ದುಬೈಗೆ ಹೋಗಿದ್ದು ಸಹ ಇದೇ ಕಾರಣಕ್ಕೆ ಎಂದಿದ್ದಾರೆ.
ವರದಿ : ಲಾವಣ್ಯ ಅನಿಗೋಳ

