ಕೆಜಿಎಫ್ ಅಂದ್ರೆ ಸಾಕು ಚಿನ್ನ ನೆನಪಾಗುತ್ತೆ.. ಕೋಲಾರ ಚಿನ್ನದ ಗಣಿಯ ಅಧ್ಯಾಯ ಬಹುತೇಕ ಮುಗಿದೇ ಹೋಯಿತು ಎಂಬ ಮಾತುಗಳ ಮಧ್ಯೆ ಇದೀಗ ಮತ್ತೊಮ್ಮೆ ಚಿನ್ನದ ಗಣಿಗಾರಿಕೆ ಆರಂಭಿಸುವ ಹೊಸದೊಂದು ಅಧ್ಯಾಯಕ್ಕೆ ರಾಜ್ಯ ಸರ್ಕಾರ ಮುನ್ನುಡಿ ಬರೆದಿದೆ. ಕೆಜಿಎಫ್ ಚಿನ್ನದ ಗಣಿಯನ್ನು ಕೇಂದ್ರ ಸರ್ಕಾರವೇ ಗಣಿಗಾರಿಕೆ ನಡೆಸಲಿ ಎಂದು ರಾಜ್ಯ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದ್ದು, ಕೋಲಾರ ಜಿಲ್ಲೆಯಲ್ಲಿ ಚಿನ್ನದ ಗಣಿ ಯುಗ ಮತ್ತೆ ಮರುಕಳಿಸಲಿದೆ.
ಸುಮಾರು 24 ವರ್ಷಗಳ ನಂತರ ಕೆಜಿಎಫ್‍ಗೆ ಅಂಟಿದ್ದ ಧೂಳು ಸರಿಯುತ್ತಿದೆ. ಅಲ್ಲಿ ಮತ್ತೆ ಚಿನ್ನ ತೆಗೆಯಲಿಕ್ಕೆ ಕೇಂದ್ರ ಸರ್ಕಾರ ರಾಜ್ಯದ ಅನುಮತಿಯನ್ನ ಕೇಳಿದೆ…. ಮತ್ತು ಅದಕ್ಕೆ ರಾಜ್ಯ ಸರ್ಕಾರ ಓಕೆ ಅಂತ ಹೇಳಿದೆ… ಮತ್ತೆ ಕೋಲಾರದ ಕೆಜಿಎಫ್ನಲ್ಲಿ ಚಿನ್ನ ತೆಗೆಯುವ ಕೆಲಸ ಶುರುವಾಗ್ತಾ ಇದೆ.
24 ವರ್ಷ ಕೆಜಿಎಫ್ನಲ್ಲಿ ಚಿನ್ನ ಇರ್ಲಿಲ್ವಾ? ಚಿನ್ನ ಇದ್ದರೂ ಕೂಡ ಯಾಕ್ ಯಾರು ಅದನ್ನ ಗಣಿಗಾರಿಕೆ ಮಾಡಿಲ್ಲ? ಹಾಗಾದ್ರೆ ಯಾಕೆ ಆಗಲಿಲ್ಲ ಸರ್ಕಾರ ಮುಚ್ಚಿತ್ತು? ಎಲ್ಲದರ ಬಗ್ಗೆ ಡೀಟೇಲ್ಸ್ ನೋಡ್ತಾ ಹೋಗೋಣ.
ಒಂದು ಕಾಲದಲ್ಲಿ ಕೆಜಿಎಫ್ನಲ್ಲಿ ಅಪಾರ ಪ್ರಮಾಣದ ಚಿನ್ನದ ಗಣಿಗಾರಿಕೆ ನಡೆಯುತ್ತಿತ್ತು. ಅಲ್ಲಿ ನಿತ್ಯ ಸಾವಿರಾರು ಜನರು ಕೆಲಸ ಮಾಡ್ತಿದ್ರು. ಚಿನ್ನದ ಗಣಿಗಾರಿಕೆ ಅದೆಷ್ಟೋ ಜನರಿಗೆ ಉದ್ಯೋಗವನ್ನು ಒದಗಿಸಿಕೊಟ್ಟಿತ್ತು. ಆದ್ರೆ ಕಾಲಾನಂತರ ಅಲ್ಲಿ ಚಿನ್ನದ ಪ್ರಮಾಣ ಕಡಿಮೆಯಾಗಿ ಸಿಗ್ತೀರೋ ಚಿನ್ನದ ಮೌಲ್ಯಕ್ಕಿಂತ ಗಣಿಗಾರಿಕೆ ವೆಚ್ಚವೇ ಜಾಸ್ತಿಯಾಯ್ತು. ಹೀಗಾಗಿ ಅಲ್ಲಿ ಗೋಲ್ಡ್ ಮೈನಿಂಗ್ ಸ್ಥಗಿತಗೊಳಿಸಲಾಗಿತ್ತು. ಆದ್ರೆ ಕೆಜಿಎಫ್ ನಲ್ಲಿ ಮತ್ತೆ ಗಣಿಗಾರಿಕೆ ಆರಂಭಿಸಬೇಕು ಅನ್ನೋ ಕೂಗು ಆಗಾಗ್ಗೆ ಕೇಳಿ ಬರುತ್ತಲೇ ಇತ್ತು. ಈ ಹಿಂದೆ ಸುಪ್ರೀಂ ಕೋರ್ಟ್ ಕೂಡ ಆಧುನಿಕ ತಂತ್ರಜ್ಞಾನ ಬಳಸಿ ಅಲ್ಲಿ ಮತ್ತೆ ಮೈನಿಂಗ್ ಆರಂಭಿಸುವಂತೆ ಸೂಚಿಸಿತ್ತು. ಕೆಜಿಎಫ್ ನಲ್ಲಿ ಚಿನ್ನದ ಬೇಟೆಗೆ ಈಗ ಕಾಲ ಕೂಡಿ ಬಂದಿದೆ. ಕೋಲಾರದಲ್ಲಿ ಯಾವಾಗಿನಿಂದ ಗಣಿಗಾರಿಕೆ ಶುರುವಾಯ್ತು ಅನ್ನೋದಕ್ಕೆ ಸಷ್ಟ ದಾಖಲೆಯಿಲ್ಲ. ಆದ್ರೆ ಸರ್ಕಾರ ಅನುಮತಿ ನೀಡಿದ್ದೆಂತು ನೀಜ.
ಬ್ರಿಟಿಷರು ಭಾರತಕ್ಕೆ ಬರುವ ಮೊದಲು ಕೂಡ ಇಲ್ಲಿ ಕಬ್ಬಿಣ ಹಾಗೂ ಚಿನ್ನದ ಅದಿರನ್ನು ತೆಗೆದು ಲೋಹಗಳನ್ನ ತಯಾರಿಸಲಾಗುತ್ತಿತ್ತು. ಆದ್ರೆ ಆಗ ಸಣ್ಣ ಪ್ರಮಾಣದಲ್ಲಿ ಅಗತ್ಯಕ್ಕೆ ತಕ್ಕಂತೆ ಅದಿರನ್ನ ಹೊರತೆಗೆಯಲಾಗ್ತಿತ್ತು. ಮೈಸೂರು ಅರಸರ ಕಾಲದಲ್ಲೂ ಇಲ್ಲಿ ಗಣಿಗಾರಿಕೆ ನಡೆಯುತ್ತಿದ್ದ ಬಗ್ಗೆ ಐತಿಹಾಸಿಕ ಉಲ್ಲೇಖಗಳಿವೆ. ಬ್ರಿಟಿಷರು ಭಾರತಕ್ಕೆ ಬಂದ ಮೇಲೆ 1880ರಲ್ಲಿ ಕೆಜಿಎಫ್ನಲ್ಲಿ ಅಧಿಕೃತವಾಗಿ ದೊಡ್ಡ ಪ್ರಮಾಣದಲ್ಲಿ ಮೈನಿಂಗ್ ಆರಂಭವಾಯ್ತು.
ಜಾನ್ ಟೇಲರ್ ಎನ್ನೋ ವ್ಯಕ್ತಿ ಬ್ರಿಟಿಷ್ ಸರ್ಕಾರದಿಂದ ಅನುಮತಿ ಪಡೆದುಕೊಂಡು ಗಣಿಗಾರಿಕೆ ಆರಂಭಿಸಿದ್ರು. ಆರಂಭದಲ್ಲಿ ಸಮೃದ್ಧವಾಗಿ ಚಿನ್ನ ದೊರೆಯುತ್ತಿತ್ತು. ಅಂದಿನ ಕಾಲಕ್ಕೆ ಈ ಗಣಿಯಲ್ಲಿ ಅಂದಾಜು 22 ಸಾವಿರ ಕಾರ್ಮಿಕರು ಕೆಲಸ ಮಾಡ್ತಿದ್ದರು ಎನ್ನಲಾಗುತ್ತದೆ. ಬ್ರಿಟಿಷರಿಗೂ ಕೂಡ ಈ ಗಣಿ ಮೇಲೆ ವಿಶೇಷ ಆಸಕ್ತಿ ಇತ್ತು. ಹೀಗಾಗಿ ಶಿವನ ಸಮುದ್ರದಲ್ಲಿ ಜಲ ವಿದ್ಯುತ್ ಆರಂಭಿಸಿ ವಿದ್ಯುತ್ ಸಂಪರ್ಕವನ್ನು ನೀಡಿದ್ರು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬಳಿಕ ಕೆಜಿಎಫ್ ಕೇಂದ್ರ ಸರ್ಕಾರದ ಅಧೀನಕ್ಕೆ ಒಳಪಟ್ಟಿತು. ಭಾರತ್ ಗೋಲ್ಡ್ ಮೈನ್ಸ್ ಕಂಪನಿ 2001ರವರೆಗೆ ಅಲ್ಲಿ ಗಣಿಗಾರಿಕೆ ನಡೆಸ್ತು.ಅಷ್ಟೊತ್ತಿಗಾಗಲೇ ಕೆಜಿಎಫ್ ನಿಂದ 800 ಟನ್ ನಷ್ಟು ಚಿನ್ನ ಹೊರತೆಗೆಯಲಾಗಿತ್ತು. ಅಲ್ಲಿ ಚಿನ್ನದ ಪ್ರಮಾಣ ಕಡಿಮೆಯಾಗಿತ್ತು. ಗಣಿಗಾರಿಕೆ ವೆಚ್ಚ ಹೆಚ್ಚಾಗಿ ಲಾಭ ಕಡಿಮೆಯಾಗಿದ್ದಕ್ಕೆ ಕೇಂದ್ರ ಸರ್ಕಾರ ಅಲ್ಲಿ ಚಿನ್ನದ ಗಣಿಗಾರಿಕೆ ನಿಲ್ಲಿಸಿತು. ಇದೇ ಕಾರಣಕ್ಕೆ ನಮ್ಮ ಹೆಮ್ಮೆಯ ಕೆಜಿಎಫ್‍ಗೆ 24 ವರ್ಷಗಳಿಂದ ಗ್ರಹಣದಿಂದ ಮುಚ್ಚಿತ್ತು.ಕೆಜಿಎಫ್ ನಲ್ಲಿ ಮತ್ತೆ ಗಣಿಗಾರಿಕೆ ಆರಂಭಿಸಬೇಕು ಅನ್ನೋ ಪ್ರಸ್ತಾಪಕ್ಕೆ ಬಲ ಬಂದಿದ್ದು 2020ರಲ್ಲಿ…. ಅದು ಕೂಡ ಕರ್ನಾಟಕದವರೇ ಆದ ಪ್ರಹ್ಲಾದ್ ಜೋಶಿ ಗಣಿಗಾರಿಕೆ ಸಚಿವರಾದ ಮೇಲೆ..
ಇನ್ನು ಸದ್ಯ ಕೆಜಿಎಫ್ನ 24,790 ಎಕರೆ ವಿಸ್ತೀರ್ಣದಲ್ಲಿ 13 ಕಡೆ ಬೆಟ್ಟದಂತೆ ರಾಶಿ ಬಿದ್ದಿರುವ ಮಣ್ಣಿನಲ್ಲಿ ಚಿನ್ನ ಸಂಸ್ಕರಣೆಗೆ ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರ ನಡೆಸಿದ ಸರ್ವೆಯಲ್ಲಿ ಕೆಜಿಎಫ್ ನ ಸೈನೈಡ್ ಗುಡ್ಡದಲ್ಲಿ ಇನ್ನೂ ಚಿನ್ನವಿರೋದು ಪತ್ತೆಯಾಗಿದೆ. 320ಮಿಲಿಯನ್ ಟನ್ ಮಣ್ಣು ಸಂಸ್ಕರಣೆಯಿಂದ 32 ಸಾವಿರ ಕೆಜಿ ಚಿನ್ನ ಸಿಗಬಹುದೆಂದು ನಿರೀಕ್ಷಿಸಲಾಗಿದೆ. ಇದು ಅಲ್ಲಿ ಒಂದಿಷ್ಟು ಜನ್ರಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸಲಿದೆ. ಸದ್ಯಕ್ಕೆ ಭಾರತದಲ್ಲಿ ಹೆಚ್ಚಿನ ಚಿನ್ನ ಹೊರತೆಗೆಯುತ್ತಿರೋದು ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನಲ್ಲಿರುವ ಹಟ್ಟಿ ಚಿನ್ನದ ಗಣಿಯಲ್ಲಿ. ಇದರ ಜೊತೆಗೆ ಆಂಧ್ರ ಪ್ರದೇಶ, ಉತ್ತರ ಪ್ರದೇಶ, ಜಾಖರ್ಂಡ್ ನಲ್ಲೂ ಚಿನ್ನದ ನಿಕ್ಷೇಪಗಳಿವೆ.
ಆದ್ರೂ ಕೂಡ ಭಾರತದಲ್ಲಿ ವಾರ್ಷಿಕ 1.80 ಟನ್ ಚಿನ್ನ ಉತ್ಪಾದನೆಯಾಗ್ತಿದೆ. ಆದ್ರೆ ನಮ್ಮಲ್ಲಿ ಬೇಡಿಕೆಯಿರೋದು ಬರೋಬ್ಬರಿ 800 ಟನ್. ಈ ಹೆಚ್ಚುವರಿ ಚಿನ್ನವನ್ನ ವಿದೇಶಗಳಿಂದ ಆಮದು ಮಾಡಿಕೊಳ್ತಿದ್ದೇವೆ. ಇದ್ರಿಂದ ದೇಶದ ಖಜಾನೆ ಮೇಲೂ ಭಾರ ಬೀಳ್ತಿದೆ. ನಮ್ಮದೇ ದೇಶದಲ್ಲಿ ಚಿನ್ನದ ಉತ್ಪಾದನೆ ಮಟ್ರಾಷ್ಟು ಹೆಚ್ಚಾದರೆ ಆರ್ಥಿಕ ಹೊರೆಯು ತಗ್ಗಲಿದೆ. ಈ ಎಲ್ಲ ಕಾರಣಗಳಿಗಾಗಿಯೇ ಚಿನ್ನದ ಗಣಿಗಾರಿಕೆಗೆ ಕೇಂದ್ರ ಸರಕಾರ ಹೆಚ್ಚು ಒತ್ತು ನೀಡ್ತಿದೆ. ಹೀಗೆ ಆದಷ್ಟು ಬೇಗ ಕೆಜಿಎಫ್ ನಲ್ಲಿ ಚಿನ್ನದ ಗಣಿಗಾರಿಕೆ ಆರಂಭವಾಗಲಿ ಅನ್ನೋದೆ ನಮ್ಮ ಆಶಯ…..