Political News: ರಾಜಕಾರಣ ಅಂದರೇನೆ ಹಾಗೆ. ಇಲ್ಲಿ ಕೆಲವು ಹೇಳಿಕೆಗಳಿಗೆ ಮಹತ್ವ ಇರೋದಿಲ್ಲ. ಒಂದಷ್ಟು ಹೇಳಿಕೆಗಳಂತೂ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತವೆ. ಅಷ್ಟೇ ಯಾಕೆ, ಹೇಳಿಕೆಗೆ ವಿರುದ್ಧದ ಹೇಳಿಕೆ ಹೊರಬರುತ್ತವೆ. ಇನ್ನೂ ಒಂದು ಹಂತಕ್ಕೆ ಹೋಗಿ ಹೇಳುವುದಾದರೆ, ಎಲ್ಲೋ ನಿಂತು ಹೇಳಿದ ಯಾವುದೋ ಒಂದು ಹೇಳಿಕೆ ಕೂಡ ಪೊಲೀಸ್ ಠಾಣೆ ಮೆಟ್ಟಿಲು ಏರುವಂತಹ ಪರಿಸ್ಥಿತಿ ಕೂಡ ನಿರ್ಮಾಣವಾಗಿಬಿಡುತ್ತೆ. ರಾಜಕಾರಣದಲ್ಲಿ ಮಾತ್ರ ಕೆಲವು ನಾಯಕರ ಮಾತುಗಳು ಇಂತಹ ಸ್ಥಿತಿ ತಲುಪುತ್ತವೆ.
ಪ್ರತಿಯೊಬ್ಬ ರಾಜಕಾರಣಿಗಳ ಮಾತಿನ ಮೇಲೆ ಹಿಡಿತ ಇದ್ದರೆ, ಬಹುಶಃ ಪೊಲೀಸ್ ಠಾಣೆ, ಕೋರ್ಟ್ ಮೆಟ್ಟಿಲು ಹತ್ತೋ ಸಂದರ್ಭ ಬರೋದಿಲ್ಲ ಅನ್ಸುತ್ತೆ. ಇಷ್ಟಕ್ಕೂ ಇಲ್ಲಿ ಹೇಳ ಹೊರಟಿರುವ ವಿಷಯ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನೀಡಿದ್ದ ಹೇಳಿಕೆ ವಿರುದ್ಧ ಬೆಂಗಳೂರಿನ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರಾಹುಲ್ ಗಾಂಧಿ ಅವರ ಹೇಳಿಕೆಗಳ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲು ಏರುವುದು ಹೊಸದೇನಲ್ಲ ಬಿಡಿ. ಆದರೆ, ರಾಹುಲ್ ಗಾಂಧಿ ಅವರ ಹೇಳಿಕೆ ಗಂಭೀರ ಸ್ವರೂಪದ್ದು ಅನ್ನುವ ಕಾರಣಕ್ಕೆ ಸದ್ಯ ಪ್ರಕರಣ ದಾಖಲಾಗಿದೆ.
ಹೌದು, ಇತ್ತೀಚೆಗೆ ಅಮೇರಿಕಕ್ಕೆ ಹೋಗಿದ್ದ ಸಂದರ್ಭದಲ್ಲಿ ಸಂಸದ ರಾಹುಲ್ ಗಾಂಧಿ ಅವರು ಮೀಸಲಾತಿ ಕುರಿತು ಹೇಳಿಕೆಯೊಂದನ್ನು ನೀಡಿದ್ದರು. ಅದನ್ನು ಖಂಡಿಸಿ ಬಿಜೆಪಿ ನಾಯಕರು ಪ್ರಕರಣ ದಾಖಲಿಸಿದ್ದಾರೆ. ಈ ಕುರಿತಂತೆ ಬಿಜೆಪಿ-ಜೆಡಿಎಸ್ ಕೂಡ ರಾಹುಲ್ ಗಾಂಧಿ ಅವರ ಹೇಳಿಕೆ ಖಂಡಿಸಿ, ಪ್ರತಿಭಟನೆ ನಡೆಸಿತ್ತು. ಈಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ದೂರು ದಾಖಲಿಸಿದೆ ಅನ್ನೋದು ಈ ಹೊತ್ತಿನ ಸುದ್ದಿ.
ಮೀಸಲಾತಿ ಬಗ್ಗೆ ಅಮೆರಿಕದಲ್ಲಿ ರಾಹುಲ್ ಗಾಂಧಿ ನೀಡಿರುವ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಧ್ವನಿ ಎತ್ತಿರುವ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ರಾಜಕುಮಾರ್ ಪಾಟೀಲ್, ಬಿಜೆಪಿ ಮುಖಂಡ ವಸಂತಕುಮಾರ್ ಸೇರಿ ಬಿಜೆಪಿಯ ಹಲವು ನಾಯಕರು ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ್ದಾರೆ.
ಇಷ್ಟಕ್ಕೂ ರಾಹುಲ್ ಗಾಂಧಿ ಹೇಳಿದ್ದೇನು? ಹಾಗೆ ನೋಡುವುದಾದರೆ, ರಾಹುಲ್ ಗಾಂಧಿ ಇತ್ತೀಚೆಗೆ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಆ ಸಂದರ್ಭ ಮಾಧ್ಯಮ ಸಂವಾದದಲ್ಲಿ ಅವರು ಭಾಗವಹಿಸಿದ್ದರು. ಆಗ, ‘ಭಾರತದಲ್ಲಿ ಸಮಾನತೆಯ ಸ್ಥಿತಿ ಮೂಡಿದ ನಂತರ ಮೀಸಲಾತಿ ವ್ಯವಸ್ಥೆಯ ರದ್ಧತಿ ಕುರಿತು ಕಾಂಗ್ರೆಸ್ ಪಕ್ಷ ಚಿಂತಿಸಲಿದೆ’ ಎಂದಿದ್ದರು. ‘ನಾನು ಮೀಸಲಾತಿಗೆ ವಿರುದ್ಧವಾಗಿದ್ದೇನೆ ಎಂಬಂತೆ ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ. ಮೀಸಲಾತಿ ಮಿತಿಯನ್ನು ನಾವು ಶೇ. 50ರಷ್ಟು ಮೀರಿ ವಿಸ್ತರಿಸಲಿದ್ದೇವೆ’ ಎಂದು ಸ್ಪಷ್ಟನೆ ಕೊಟ್ಟಿದ್ದರು.
ಅವರ ಈ ಹೇಳಿಕೆಯಿಂದಾಗಿ, ರಾಜ್ಯದೆಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಬಿಜೆಪಿ ನಾಯಕರು ಪ್ರತಿಭಟಿಸಿ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ್ದರು. ಸಂವಿಧಾನವನ್ನು ಗೌರವಿಸುವ ಯಾರೊಬ್ಬರೂ ರಾಹುಲ್ ಗಾಂಧಿ ಅವರ ನಡೆಯನ್ನು ಒಪ್ಪುವುದಿಲ್ಲ. ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರ ಇಂತಹ ನಿಲುವು ಅವರ ಸಂವಿಧಾನ ವಿರೋಧಿ ಮನಃಸ್ಥಿತಿ ತೋರಿಸುತ್ತದೆ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನ್‌ಕರ್ ಕೂಡ ರಾಹುಲ್ ಗಾಂಧಿ ಅವರನ್ನು ಟೀಕಿಸಿದ್ದಾರೆ.
ಇನ್ನು, ರಾಹುಲ್ ಗಾಂಧಿ ಅವರ ನಾಲಗೆ ಕತ್ತರಿಸುವ ವ್ಯಕ್ತಿಗೆ 11 ಲಕ್ಷ ರೂಪಾಯಿ ನೀಡುವುದಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದ ಶಾಸಕ ಸಂಜಯ್ ಗಾಯಕ್‌ವಾಡ್ ಹೇಳಿದ್ದರು. ಅದೂ ಕೂಡ ಸಾಕಷ್ಟು ವಿವಾದಕ್ಕೆ ಮತ್ತು ಚರ್ಚೆಗೆ ಗ್ರಾಸವಾಗಿತ್ತು. ಅದೇನೆ ಇರಲಿ, ಆಗಾಗ ರಾಜಕೀಯದಲ್ಲಿ ಇಂತಹ ಹೇಳಿಕೆಗಳು ಮುಖಂಡರಿಂದ ಬರುತ್ತಲೇ ಇರುತ್ತವೆ. ಪ್ರತಿಭಟನೆ, ಆಕ್ರೋಶ ಕೂಡ ಸಹಜವಾಗಿರುತ್ತೆ. ಆದರೂ, ಕೆಲ ಹೇಳಿಕೆಗಳು ಗಂಭೀರ ಸ್ವರೂಪದ್ದು ಅಂದಾಗ, ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗುತ್ತಿರುತ್ತವೆ. ಆ ಸಾಲಿಗೆ ಈಗ ರಾಹುಲ್ ಗಾಂಧಿ ಅವರ ಹಳಿಕೆ ಕೂಡ ದೂರಿಗೆ ಕಾರಣವಾಗಿದೆ.