ಸಕಲೇಶಪುರದ ದಟ್ಟಾರಣ್ಯದಲ್ಲಿ ಅಂಬಾರಿ ಆನೆಯ ನೆನಪು ಶಾಶ್ವತ!

ದಬ್ಬಳ್ಳಿಕಟ್ಟೆಯಲ್ಲಿ ಅಂಬಾರಿ ಆನೆ ಅರ್ಜುನನ ಪ್ರತಿಮೆ ಲೋಕಾರ್ಪಣೆ. ಹಲವು ಬಾರಿ ಮುಂದೂಡಿಕೆಯಾದ ಉದ್ಘಾಟನೆಗೆ ಇಂದು ಚಾಲನೆ ಸಿಗಲಿದೆ.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ಮೀಸಲು ಅರಣ್ಯ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಅಂಬಾರಿ ಆನೆ ಅರ್ಜುನನ ಪ್ರತಿಮೆಯನ್ನು ಇಂದು ಸಾರ್ವಜನಿಕರಿಗೆ ಸಮರ್ಪಿಸಲಾಗುತ್ತಿದೆ. ದಸರಾ ವೈಭವದ ಪ್ರತೀಕವಾಗಿದ್ದ ಅರ್ಜುನನ ಸ್ಮರಣಾರ್ಥ ನಿರ್ಮಿಸಿರುವ ಈ ಸ್ಮಾರಕದ ಉದ್ಘಾಟನಾ ಕಾರ್ಯಕ್ರಮಕ್ಕೆ ವಿಶೇಷ ಸಿದ್ಧತೆಗಳನ್ನು ಮಾಡಲಾಗಿದೆ. ಈ ಕಾರ್ಯಕ್ರಮ ಈಗಾಗಲೇ ಎರಡು ಬಾರಿ ಮುಂದೂಡಿಕೆಯಾಗಿದ್ದ ಹಿನ್ನೆಲೆ, ಮೂರನೇ ಬಾರಿ ಇಂದು ಸಂಜೆ 4:30ಕ್ಕೆ ಲೋಕಾರ್ಪಣೆ ನಡೆಯಲಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಭೈರೇಗೌಡ ಹಾಗೂ ಶಾಸಕ ಸಿಮೆಂಟ್‌ಮಂಜು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

2023ರ ಡಿಸೆಂಬರ್ 4ರಂದು ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮದಗಜದೊಂದಿಗೆ ಹೋರಾಡಿದ ಅರ್ಜುನ ವೀರಮರಣ ಹೊಂದಿತ್ತು. ಈ ಘಟನೆ ರಾಜ್ಯದ ಜನರಲ್ಲಿ ಭಾರೀ ನೋವುಂಟು ಮಾಡಿತ್ತು. ನಂತರ ಅರಣ್ಯ ಇಲಾಖೆ ಅರ್ಜುನ ಮೃತಪಟ್ಟ ಸ್ಥಳದಲ್ಲೇ ಅಂತ್ಯಸಂಸ್ಕಾರ ನೆರವೇರಿಸಿತ್ತು. ಅರ್ಜುನನ ನೆನಪನ್ನು ಶಾಶ್ವತಗೊಳಿಸುವ ಉದ್ದೇಶದಿಂದ ಪ್ರತಿಮೆ ನಿರ್ಮಿಸಲಾಗಿದ್ದು, ಇದೀಗ ಅದು ಅಭಿಮಾನಿಗಳು ಮತ್ತು ಪ್ರವಾಸಿಗರ ಗಮನ ಸೆಳೆಯುತ್ತಿದೆ. ದಸರಾ ಅಂಬಾರಿ ಹೊತ್ತಿದ್ದ ಅರ್ಜುನ ರಾಜ್ಯದ ಹೆಮ್ಮೆಯ ಆನೆಯಾಗಿ ಗುರುತಿಸಿಕೊಂಡಿತ್ತು. ಇನ್ನೊಂದೆಡೆ, ಪ್ರತಿಮೆ ನಿರ್ಮಾಣಗೊಂಡು ಸಾಕಷ್ಟು ಸಮಯವಾದರೂ ಸ್ಥಳದಲ್ಲಿ ಮೂಲಸೌಕರ್ಯಗಳ ಕೊರತೆ ಇದೆ ಎಂದು ಶಾಸಕ ಸಿಮೆಂಟ್‌ಮಂಜು ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಸರ್ಕಾರ ಮತ್ತು ಅರಣ್ಯ ಇಲಾಖೆ ಅಗತ್ಯ ಸೌಲಭ್ಯ ಒದಗಿಸಿಲ್ಲ ಎಂದು ಅವರು ಟೀಕಿಸಿದ್ದರು.

About The Author