ಮಹಾಭಾರತದ ಕರ್ಣ ಎಂದ ತಕ್ಷಣ ಎಲ್ಲರ ಮನಸ್ಸಿಗೂ ಬರುವ ವಿಷಯ ಅಂದ್ರೆ ದಾನ, ತ್ಯಾಗ, ಶೂರತ್ವ. ಹಾಗಾಗಿ ಅವನನ್ನು ದಾನ ಶೂರ ಕರ್ಣ ಎಂದು ಕರೆಯಲಾಗುತ್ತದೆ. ಆತನ ಹುಟ್ಟಿನಿಂದ ಹಿಡಿದು ಸಾವನವರೆಗೂ ಬೇರೆಯವರ ಸಲುವಾಗಿಯೇ ಬದುಕ್ಕಿದ್ದನೇ ಹೊರತು, ತನಗಾಗಿ ಕರ್ಣ ಬದುಕಿಲ್ಲ. ಕುಂತಿ ತನಗೆ ಸಿಕ್ಕ ವರವನ್ನು ಪರೀಕ್ಷಿಸಲು ಕಿವಿಯ ಮೂಲಕ ಪಡೆದ ಮಗುವೇ ಕರ್ಣ. ಎಲ್ಲಿ ತನಗೆ ಮಗುವಾದ ವಿಷಯ ಯಾರಿಗಾದರೂ ಗೊತ್ತಾಗುತ್ತದೆಯೋ ಎಂಬ ಕಾರಣಕ್ಕೆ ಕುಂತಿ, ಆತನನ್ನು ನದಿಯಲ್ಲಿ ತೇಲಿ ಬಿಟ್ಟಳು. ಕ್ಷತ್ರೀಯ ವಂಶದ ಕರ್ಣ, ಮೀನುಗಾರರ ಬಾಲಕನಾಗಿ ಬೆಳೆಯಬೇಕಾಯ್ತು. ಇನ್ನು ಮಹಾಭಾರತ ಯುದ್ಧದ ಸಮಯದಲ್ಲಿ ಮೋಸದಿಂದಲೇ ಕರ್ಣನನ್ನು ಕೊಲ್ಲಲಾಯಿತು. ಹಾಗಾದ್ರೆ ಮಹಾಭಾರತ ಸಮಯದಲ್ಲಿ ಕರ್ಣನ ವಿರುದ್ಧ ನಡೆದ ಸಂಚೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಪಾಂಡವರಿಗೆ ಕೌರವರನ್ನು ಸೋಲಿಸಿ, ಲೋಕವನ್ನು ಕೌರವರಿಂದ ಕಾಪಾಡಬೇಕಿತ್ತು. ಹಾಗಾಗಿ ಕೌರವರನ್ನು ಸೋಲಿಸಲೇಬೇಕು ಮತ್ತು ಸಾಯಿಸಲೇಬೇಕು ಅನ್ನೋದು ಪಾಂಡವರ ಗುರಿಯಾಗಿತ್ತು. ಆದ್ರೆ ಕೌರವರ ಬಳಿ ವೀರ ಶೂರ ಕರ್ಣನಿದ್ದ. ಆತನೊಬ್ಬನಿದ್ದರೆ ಕೌರವರಿಗೆ ಆನೆ ಬಲ ಎಂಬಂತಿತ್ತು. ಹಾಗಾಗಿ ಆತನಿಗೆ ಇದ್ದ ಶಾಪವನ್ನು ತಿಳಿದೇ ಪಾಂಡವರು ಮತ್ತು ಕೃಷ್ಣ ಸೇರಿ ಕರ್ಣನನ್ನು ಛಲದಿಂದ ಕೊಂದರು. ಹಾಗಾದ್ರೆ ಕರ್ಣನಿಗಿದ್ದ ಶಾಪವೇನು ಅನ್ನೋ ಬಗ್ಗೆ ತಿಳಿಯೋಣ..
ಮೊದಲನೇಯದಾಗಿ ಕರ್ಣ ಹುಟ್ಟಿದ್ದು ಕ್ಷತ್ರೀಯನಾಗಿ. ಆದ್ರೆ ಬೆಳೆದಿದ್ದು ಸೂತಪುತ್ರನಾಗಿ. ಹಾಗಾಗಿ ಆತನ ಶೂರತ್ವಕ್ಕೆ ತಕ್ಕ ಗುರುಗಳು ಆತನಿಗೆ ಸಿಗಲಿಲ್ಲ. ಪರಶುರಾಮರು ಬರೀ ಬ್ರಾಹ್ಮಣರಿಗಷ್ಟೇ ವಿದ್ಯೆ ಹೇಳಿಕೊಡುತ್ತಿದ್ದರು. ಹಾಗಾಗಿ ಕರ್ಣ ಬ್ರಾಹ್ಮಣನ ವೇಷ ಧರಿಸಿ, ಪರಶುರಾಮರ ಬಳಿ ತನಗೆ ಬೇಕಾದ ವಿದ್ಯೆಗಳನ್ನೆಲ್ಲ ಕಲಿತ. ಆದ್ರೆ ಅವನು ಬ್ರಾಹ್ಮಣನಲ್ಲ, ಕ್ಷತ್ರೀಯ ಎಂಬ ಸತ್ಯ ಗೊತ್ತಾದಾಗ, ಪರಶುರಾಮರು, ಯುದ್ಧಕಾಲದಲ್ಲಿ ನೀನು ಕಲಿಯ ವಿದ್ಯೆಯೆಲ್ಲ ಮರೆತು ಹೋಗಲಿ ಎಂದು ಶಾಪವನ್ನಿತ್ತರು. ಹಾಗಾಗಿ ಕರ್ಣನಿಗೆ ಯುದ್ಧಕಾಲದಲ್ಲಿ ಕಲಿತ ವಿದ್ಯೆಯೆಲ್ಲ ಮರೆತು ಹೋಯಿತು.
ಇನ್ನು ಎರಡನೇಯದಾಗಿ ಒಂದು ಬಾಲೆ ಕೊಂಡೊಯ್ಯುತ್ತಿದ್ದ ತುಪ್ಪ ಬಿದ್ದು ಹೋಯಿತು. ಆಕೆ ಅಳುತ್ತಿದ್ದಳು. ಆಕೆಯ ಬಳಿ ಹೋದ ಕರ್ಣ ತನಗೆ ಗೊತ್ತಿರುವ ಮಂತ್ರವನ್ನು ಪಠಿಸಿ, ತುಪ್ಪವನ್ನು ಭೂಮಿಯಿಂದ ಬೇರ್ಪಡಿಸಿ, ಆಕೆಗೆ ಕೊಟ್ಟನು. ಆಗ ಭೂಮಿ ತಾಯಿಗೆ ಹಿಂಸೆಯಾಯಿತು. ಪ್ರತ್ಯಕ್ಷವಾದ ಭೂಮಿ ತಾಯಿ, ನೀನು ಆ ಮಗುವಿನ ಅಳು ನಿಲ್ಲಿಸುವುದಕ್ಕಾಗಿ ನನಗೆ ಹಿಂಸೆ ನೀಡಿದೆ. ಹಾಗಾಗಿ ನಿನಗೆ ನನ್ನ ಸಹಾಯ ಬೇಕಾದ ಸಮಯದಲ್ಲಿ ನಾನು ನಿನಗೆ ಸಿಗುವುದಿಲ್ಲ ಎಂದು ಹೇಳಿದಳು. ಆಕೆಯ ಶಾಪದಂತೆ, ಯುದ್ಧಕಾಲದಲ್ಲಿ ಕರ್ಣನ ರಥದ ಚಕ್ರ ಭೂಮಿಯಲ್ಲಿ ಸಿಲುಕಿತ್ತು. ಎಷ್ಟು ಶಕ್ತಿ ಹಾಕಿದರೂ ಆ ಚಕ್ರವನ್ನು ಎತ್ತಲು ಕರ್ಣನಿಗೆ ಸಾಧ್ಯವಾಗಿರಲಿಲ್ಲ. ಇದೇ ಸಮಯವನ್ನು ಬಳಸಿ, ಅರ್ಜುನ ಕರ್ಣನ ಮೇಲೆ ಬಾಣ ಪ್ರಯೋಗ ಮಾಡಿದ.
ಇದೇ ರೀತಿ ಕರ್ಣನಿಗೆ ಇನ್ನು ಕೆಲ ಶಾಪಗಳು ತಟ್ಟಿವೆ. ಆ ಶಾಪಗಳು ಯಾವುದು ಅನ್ನೋ ಬಗ್ಗೆ ಮುಂದಿನ ಕಥೆಯಲ್ಲಿ ತಿಳಿಯೋಣ.