ಮನುಷ್ಯ ಜೀವನದಲ್ಲಿ ಏನಾದ್ರೂ ಸಾಧನೆ ಮಾಡಬೇಕು ಅಂದ್ರೆ ವಿದ್ಯಾಭ್ಯಾಸ ತುಂಬಾ ಮುಖ್ಯ. ಅವಿದ್ಯಾವಂತರಾದರೂ ಕೂಡ ಸಾಧನೆ ಮಾಡಿದವರಿದ್ದಾರೆ ಅನ್ನೋದು ನಿಮ್ಮ ವಾದವಾಗಿರಬಹುದು. ಆದ್ರೂ ಕೂಡ ವಿದ್ಯೆ ಇದ್ದವರಿಗೆ ಸಿಗುವ ಗೌರವ ಇನ್ಯಾರಿಗೂ ಸಿಗುವುದಿಲ್ಲ. ಆದ್ದರಿಂದ ಮಕ್ಕಳನ್ನು ವಿದ್ಯಾವಂಂತರನ್ನಾಗಿ ಮಾಡುವುದು ತುಂಬಾ ಮುಖ್ಯ. ಆದ್ರೆ ವಿದ್ಯಾರ್ಥಿಗಳು ಸಾಧನೆ ಮಾಡಬೇಕು ಎಂದಲ್ಲಿ ಅವರು ಕೆಲ ಕೆಲಸ ಮಾಡೋದನ್ನ ಬಿಡಬೇಕು. ಹಾಗಾದ್ರೆ ಅದು ಯಾವ ಕೆಲಸ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಹಲವರು ಪರೀಕ್ಷೆ ಇನ್ನೇನು ಎರಡು ದಿನದಲ್ಲಿ ಶುರುವಾಗುತ್ತದೆ ಎಂದಾಗ, ಓದಲು ಶುರು ಮಾಡುತ್ತಾರೆ. ಆದ್ರೆ ಹೀಗೆ ಮಾಡುವುದರಿಂದ ನೀವು ಪರೀಕ್ಷೆಯಲ್ಲಿ ಒಳ್ಳೆ ಅಂಕ ಗಳಿಸಲು ಆಗುವುದಿಲ್ಲ. ಅದರ ಬದಲು ಪಾಠ ಕೇಳಿದ ದಿನವೇ ಅದರ ಬಗ್ಗೆ ಸ್ವಲ್ಪ ಸ್ವಲ್ಪ ಓದಿ, ಅದರಲ್ಲಿರುವ ಮುಖ್ಯವಾದ ವಿಷಯವನ್ನು ಅರಿತುಕೊಳ್ಳಿ. ಹೀಗೆ ಮಾಡಿದ್ದಲ್ಲಿ ಪರೀಕ್ಷೆ ಹತ್ತಿರ ಬಂದಾಗ ಒತ್ತಡಕ್ಕೆ ಒಳಗಾಗದೇ, ಆರಾಮವಾಗಿ ಪರೀಕ್ಷೆ ಬರೆಯುತ್ತೀರಿ. ಇದು ಬರೀ ವಿದ್ಯಾರ್ಥಿಗಳಿಗಷ್ಟೇ ಅಲ್ಲ, ಬದಲಾಗಿ ಎಲ್ಲರಿಗೂ ಅನ್ವಯಿಸುತ್ತದೆ. ಯಾವುದಾದರೂ ಕೆಲಸ ಮಾಡುವಾಗ ನಾಳೆ ಮಾಡೋಣ ನಾಳೆ ಮಾಡೋಣ ಎನ್ನುತ್ತ ದಿನ ದೂಡುತ್ತೀರಿ. ನಂತರ ಒಮ್ಮೆಲೆ ಕೆಲಸದ ಭಾರ ಬಿದ್ದಾಗ ಒದ್ದಾಡುತ್ತೀರಿ.
ಎರಡನೇಯದಾಗಿ ತುಂಬಾ ವಿದ್ಯಾರ್ಥಿಗಳ ಪ್ರಾಬ್ಲಮ್ ಏನಂದ್ರೆ ನಾನು ತುಂಬಾ ತುಂಬಾ ಓದ್ತೀನಿ. ಆದ್ರೆ ನನಗೆ ಓದಿದ್ದು ನೆನಪೇ ಇರಲ್ಲ ಅಂತಾರೆ. ಆದ್ರೆ ಬರೀ ಓದಿದ್ರೆ ಸಾಕಾಗಲ್ಲ. ಬದಲಾಗಿ ನೀವು ಓದಿದ ನಂತರ ಅದರಲ್ಲಿನ ಮುಖ್ಯವಾದ ವಿಷಯವನ್ನ ಬರಿಯಬೇಕು. ನೀವು ಓದಿದ್ದನ್ನ ಬರೆದು ಬರೆದು ಪ್ರಾಕ್ಟೀಸ್ ಮಾಡಿದ್ರೆ ಮಾತ್ರ ನೀವು ಓದಿದ್ದು ನಿಮಗೆ ಹಂಡ್ರೆಡ್ ಪರ್ಸೆಂಟ್ ನೆನಪಿನಲ್ಲಿರುತ್ತದೆ.
ಮೂರನೇಯದಾಗಿ ನಿಮ್ಮಲ್ಲಿ ನಿಮಗೆ ನಂಬಿಕೆ ಇರಬೇಕು. ನಾನು ಈ ಬಾರಿ ಪರೀಕ್ಷೆಯಲ್ಲಿ ಇಷ್ಟು ಮಾರ್ಕ್ಸ್ ತೆಗ್ದೇ ತೆಗಿತೀನಿ ಅಂತಾ ನಿಮಗೆ ನೀವೇ ಟಾರ್ಗೆಟ್ ಇಟ್ಕೊಳಿ. ಅದಕ್ಕಾಗಿ ಪ್ರತಿದಿನ ಬೆಳಿಗ್ಗೆ ಬೇಗ ಎದ್ದು ಓದಿ. ಓದುವ ಮುನ್ನ 5 ನಿಮಿಷ ಧ್ಯಾನ ಮಾಡಿ. ಯಾಕಂದ್ರೆ ಧ್ಯಾನ ಮಾಡಿ ಓದಿದ್ರೆ ಓದಿದ್ದು, ನೆನಪಿನಲ್ಲಿರುತ್ತೆ ಅಂತಾ ಯೋಗ ಪಟುಗಳು, ಹಿರಿಯರು ಹೇಳುತ್ತಾರೆ.
ಕೊನೆಯದಾಗಿ ನಿಮ್ಮ ಗಮನ ಬರೀ ನಿಮ್ಮ ಓದಿನ ಮೇಲಷ್ಟೇ ಇರಲಿ. ಮುಂದೆ ನನ್ನ ಭವಿಷ್ಯ ಹೇಗೆ, ನಾನು ಯಾವ ಜಾಬ್ ಮಾಡಬಹುದು. ಯಾವ ಕಂಪನಿಯಲ್ಲಿ ಎಷ್ಟು ಸ್ಯಾಲರಿ ಸಿಗುತ್ತದೆ. ನಾನೇನಾದ್ರೂ ಓಳ್ಳೆಯ ಅಂಕ ಗಳಿಸದಿದ್ದಲ್ಲಿ ಏನಾಗಬಹುದು..? ಅಪ್ಪ ಅಮ್ಮನ ಮರ್ಯಾದೆ ಪ್ರಶ್ನೆ ಏನು..? ನನಗೆಲ್ಲೂ ಕೆಲಸವೇ ಸಿಗದಿದ್ರೆ ನಾನೇನು ಮಾಡಲಿ..? ಹೀಗೆ ಭವಿಷ್ಯದ ಕುರಿತು ಅನೇಕ ವಿಚಾರಗಳನ್ನ ತಲೆಯಲ್ಲಿ ತುಂಬಿಕೊಳ್ಳಬೇಡಿ. ನಮ್ಮ ಹಣೆಬರಹದಲ್ಲಿ ಏನಾಗಬೇಕೋ ಅದು ಆಗೇ ಆಗುತ್ತದೆ. ಹಾಗಾಗಿ ಆಗಿದ್ದಾಗಲಿ ನನ್ನ ಪ್ರಯತ್ನ ನಾನು ಮಾಡುತ್ತೇನೆಂದು ನಿರ್ಧರಿಸಿ, ವಿದ್ಯಾಭ್ಯಾಸದ ಕಡೆ ಗಮನ ಕೊಡಿ.