ಸರ್ಕಾರದ ವಿರುದ್ಧ ಮತ್ತೆ ಸಮರ..?

ರೈತರ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ ಅಂತಿಮವಾಗಿ ಪ್ರತಿ ಟನ್‌ ಕಬ್ಬಿಗೆ 3,300 ರೂಪಾಯಿ ದರ ನಿಗದಿ ಮಾಡಿದೆ. ಹಿಂದಿನ 3,200 ರೂಪಾಯಿಗೆ ಕಾರ್ಖಾನೆಗಳು 50 ರೂ. ನೀಡಿದ್ರೆ, ಸರ್ಕಾರ 50 ರೂ. ಸೇರಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಸಿದ್ದರಾಮಯ್ಯ ಸರ್ಕಾರದ ತೀರ್ಮಾನವನ್ನು, ಕಬ್ಬು ಬೆಳೆಗಾರರು ಸ್ವಾಗತಿಸಿದ್ದಾರೆ. ಮತ್ತು ಪ್ರತಿಭಟನೆಯನ್ನೂ ಕೈಬಿಡಲು ನಿರ್ಧರಿಸಿದ್ದಾರೆ. ಆದ್ರೆ, ಸಕ್ಕರೆ ಸಚಿವರೇ ಪ್ರತಿಭಟನಾ ಸ್ಥಳಕ್ಕೆ ಬಂದು ಹೇಳಿದಾಗ ಮಾತ್ರ ಒಪ್ಪುತ್ತೇವೆ ಎಂದು ಷರತ್ತು ಹಾಕಿದ್ದಾರೆ.

ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ರೈತರು ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ರೈತ ಮುಖಂಡ ಶಶಿಕಾಂತ್‌ ಪಡಸಲಗಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸರ್ಕಾರದ ನಿರ್ಧಾರ ಖುಷಿ ತಂದಿದೆ. ಪ್ರತಿಭಟನೆಯನ್ನು ಹಿಂಪಡೆದಿದ್ದೇವೆ. ಆದರೆ ಹೋರಾಟ ನಿಂತಿಲ್ಲ. ಸರ್ಕಾರ ಹೇಳಿರುವ 3,300 ರೂಪಾಯಿಯಲ್ಲಿ ಒಂದು ಪೈಸೆಯೂ ಕಡಿಮೆಯಾಗುವಂತಿಲ್ಲ. ಸಂಪೂರ್ಣ ಮೊತ್ತ ರೈತರ ಅಕೌಂಟ್‌ಗೆ ಜಮೆ ಆಗ್ಬೇಕು. ಸ್ವಲ್ಪ ವ್ಯತ್ಯಾಸವಾದ್ರೂ ಮತ್ತೆ ಹೋರಾಟ ಶುರು ಮಾಡ್ತೀವಿ. ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್‌ ಪ್ರತಿಭಟನೆ ಮಾಡಬೇಕಾಗುತ್ತದೆ. ಶಿವಾನಂದ ಪಾಟೀಲರ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ವಾರ್ನ್‌ ಮಾಡಿದ್ದಾರೆ.

ಮತ್ತೋರ್ವ ರೈತ ಮುಖಂಡ ಚೂನಪ್ಪ ಪೂಜಾರಿ ಮಾತನಾಡಿ, ಸಕ್ಕರೆ ಸಚಿವ ಶಿವಾನಂದ ಪಾಟೀಲರು ಸ್ಥಳಕ್ಕೆ ಬರಬೇಕು. ಅಧಿಕೃತವಾಗಿ ಕರ್ನಾಟಕ ರಾಜ್ಯ ರೈತ ಸಂಘಕ್ಕೆ ಲೆಟರ್‌ ಕೊಡಬೇಕು. ಅಧಿಕೃತವಾಗಿ ಪತ್ರ ಸಿಕ್ಕಿದ ಮೇಲೆ ರೈತರು ಕಬ್ಬು ಕಡೀತಾರೆ ಎಂದಿದ್ದಾರೆ.

ವಿಜಯಪುರ, ಬಾಗಲಕೋಟೆಯ ಮುಧೋಳದಲ್ಲಿ ರೈತರು ಅಸಮಾಧಾನ ಹೊರಹಾಕಿದ್ದಾರೆ. ನಮ್ಮ ಬೇಡಿಕೆಯಂತೆ 3,500 ರೂಪಾಯಿ ಕೊಡದೆ ಅನ್ಯಾಯವಾಗಿದೆ ಅಂತಾ ಕಿಡಿಕಾರಿದ್ದಾರೆ. ಸರ್ಕಾರದ ನಿರ್ಧಾರಕ್ಕೆ ನಮ್ಮ ಒಪ್ಪಿಗೆ ಇಲ್ಲ. ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಮುಧೋಳದ ರೈತ ಮುಖಂಡ ವೀರಣ್ಣ ಹಂಚಿನಾಳ ಹೇಳಿದ್ದಾರೆ.

ಒಟ್ನಲ್ಲಿ, ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕಬ್ಬು ಬೆಳೆಗಾರರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ರೈತರ ಹೋರಾಟ ಮುಂದುವರೆಯುತ್ತೋ? ಅಥವಾ ಪ್ರತಿಭಟನೆ ವಾಪಸ್‌ ತೆಗೆದುಕೊಳ್ಳುತ್ತಾರಾ ಅನ್ನೋದು ಕುತೂಹಲ ಮೂಡಿಸಿದೆ.

About The Author