www.karnatakatv.net : ಕೊನೆಗೂ ಸಂಸದೆ ಸುಮಲತಾ ಜನರಿಗೆ ಕೊಟ್ಟ ಮಾತಿನಂತೆ ಮಂಡ್ಯದಲ್ಲಿ ಸ್ವಂತ ಮನೆ ನಿರ್ಮಾಣ ಮಾಡೋದಕ್ಕೆ ಕೈ ಹಾಕಿದ್ದಾರೆ. ಇವತ್ತು ಇದರ ಗುದ್ದಲಿ ಪೂಜೆ ಕೂಡ ನಡೆಯಿತು. ಆದ್ರೆ ತಮ್ಮ ಪುತ್ರ ಅಭಿಷೇಕ್ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಸುಮಲತಾರ ಈ ನಡೆ ಅನುಸರಿಸಿದ್ರಾ ಅನ್ನೋ ಪ್ರಶ್ನೆ ಮೂಡಿಸುವಂತಿದೆ.
ಹೌದು, 2019ರ ಜಿದ್ದಾಜಿದ್ದಿನ ಕಣದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಇತರೆ ಪಕ್ಷಗಳಿಗೆ ಮಣ್ಣು ಮುಕ್ಕಿಸಿದ ಸುಮಲತಾ, ಈಗ ಮಂಡ್ಯದಲ್ಲೇ ಮನೆ ಕಟ್ಟುತ್ತಿದ್ದಾರೆ. ಮಂಡ್ಯ ಜನರು ನನ್ನ ಪಾಲಿನ ದೇವರು, ನಾನು ನಿಮ್ಮ ಜೊತೆಯಲ್ಲೇ ಇದ್ದು ನಿಮ್ಮ ಸೇವೆ ಮಾಡ್ತೀನಿ ಅಂತ ಎಲೆಕ್ಷನ್ ವೇಳೆ ಮಾತುಕೊಟ್ಟಿದ್ದ ಸುಮಲತಾ ಇವತ್ತು ಅದನ್ನ ಕಾರ್ಯರೂಪಕ್ಕೆ ತರುತ್ತಿದ್ದಾರೆ. ಹೌದು ಮಂಡ್ಯ- ಮದ್ದೂರು ನಡುವಿನ ಹನಕರೆ ಗ್ರಾಮದಲ್ಲಿ ತಾವು ಖರೀದಿಸಿರೋ ಮುಕ್ಕಾಲು ಎಕರೆ ಪ್ರದೇಶದಲ್ಲಿ ಮನೆ ನಿರ್ಮಾಣ ಕಾರ್ಯಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ರು.
ಆದ್ರೆ ಇದರ ಹಿಂದೆ ಸಂಸದೆ ಸುಮಲತಾ ಬೇರೆಯದ್ದೇ ಲೆಕ್ಕಾಚಾರ ಇಟ್ಟುಕೊಂಡಿದ್ದಾರೆ ಅನ್ನೋ ಮಾತುಗಳು ಕೇಳಿಬರ್ತಿವೆ. ತಮ್ಮ ಪುತ್ರ ಅಭಿಷೇಕ್ ನ ರಾಜಕೀಯ ಭವಿಷ್ಯಕ್ಕಾಗಿ ಸುಮಲತಾ ಇಲ್ಲಿ ಮನೆ ಕಟ್ತಿದ್ದಾರೆ ಅಂತ ಹೇಳಲಾಗ್ತಿದೆ. ಮುಂಬರುವ ಚುನಾವಣೆಯಲ್ಲಿ ಪುತ್ರ ಅಭಿಷೇಕ್ ನನ್ನು ಸ್ಪರ್ಧೆಗಿಳಿಸೋ ಉದ್ದೇಶ ಇಟ್ಟುಕೊಂಡಿರೋ ಸುಮಲತಾ ಇದಕ್ಕಾಗಿ ಈಗಿನಿಂದಲೇ ಬುನಾದಿ ಹಾಕ್ತಿದ್ದಾರೆ. ಇನ್ನು ಕಳೆದ ಕೆಲ ತಿಂಗಳ ಹಿಂದೆ ಅಭಿಷೇಕ್ ಮದ್ದೂರಿಗೆ ಭೇಟಿ ನೀಡಿದ್ದ ವೇಳೆಯೇ ಈ ಕುರಿತಾಗಿ ಅವರನ್ನು ಪ್ರಶ್ನಿಸಿದಾಗ ಅವರು ಸದ್ಯಕ್ಕೆ ಅಂತಹ ಯೋಚನೆ ಇಲ್ಲ ಅಂದಿದ್ರು. ಆದ್ರೆ ಇವತ್ತು ಮಾತನಾಡಿರೋ ಸುಮಲತಾ, ಕಳೆದ ಲೋಕಸಭಾ ಚುನಾವಣೆ ವೇಳೆ ಕೊಟ್ಟಿದ್ದ ಭರವಸೆಯನ್ನ ಹಂತ ಹಂತವಾಗಿ ನೆರವೇರಿಸ್ತಿದ್ದೀನಿ. ಅದರಲ್ಲಿ ಇಲ್ಲೇ ಮನೆ ಕಟ್ಟೋದು ಒಂದಾಗಿತ್ತು ಅಂದ್ರು. ಅಲ್ಲದೆ, ತಾವು ರಾಜಕೀಯಕ್ಕೆ ಬಂದಿದ್ದೇ ಅನಿರೀಕ್ಷಿತ. ಇನ್ನು ಪುತ್ರ ಅಭಿಷೇಕ್ ಮುಂದಿನ ಚುನಾವಣೆಗೆ ಸ್ಪರ್ಧಿಸೋದು ಬಿಡೋದು ಯಾವುದೂ ನಮ್ಮ ಕೈಲಿಲ್ಲ. ಮೇಲೆ ಒಬ್ಬ ಎಲ್ಲರ ಕಥೆ ಬರೀತಿರ್ತಾನೆ ಅಂತ ಜಾಣತನದ ಉತ್ತರ ಕೊಟ್ರು.
ಇನ್ನು ತಾಯಿ ಸುಮಲತಾ ಉತ್ತರಕ್ಕಿಂತ ಕೊಂಚ ಸ್ಪಷ್ಟವಾಗಿ ಈ ವಿಚಾರವಾಗಿ ಪ್ರತಿಕ್ರಿಯಿಸೋ ಅಭಿಷೇಕ್, ನಾನು ಚುನಾವಣೆಗೆ ನಿಲ್ಲಬೇಕು ಅಂತ ಜನ ಬಯಸಿದ್ರೆ ನಾನು ಸ್ಪರ್ಧಿಸ್ತೇನೆ ಅಂತ ಹೇಳಿಕೆ ನೀಡಿದ್ದಾರೆ. ಇದು ಕೂಡ ಅಭಿಷೇಕ್ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಅನ್ನೋ ಸಂಶಯಕ್ಕೆ ಮತ್ತಷ್ಟು ಪುಷ್ಟಿ ನೀಡ್ತಿದೆ.
ಒಟ್ಟಾರೆ ತಮ್ಮ ಅಧಿಕಾರಾವಧಿಯಲ್ಲೇ ಪುತ್ರನಿಗೂ ರಾಜಕೀಯ ಭವಿಷ್ಯ ಕಟ್ಟಿಕೊಡಲು ಸಂಸದೆ ಸುಮಲತಾ ಪ್ರಯತ್ನಿಸ್ತಿದ್ದಾರೆ ಅನ್ನೋದು ರಾಜಕೀಯ ವಲಯದಲ್ಲಿ ಕೇಳಿಬರ್ತಿರೋ ಮಾತಾಗಿದೆ.