ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌ಗೆ ಕೋರೋನಾ ಬಂದಿದ್ದು, ಈ ಬಗ್ಗೆ ಚಿಕಿತ್ಸೆ ಪಡೆದು ಸದ್ಯ ಸುಮಲತಾ ಸಂಪೂರ್ಣ ಗುಣಮುಖರಾಗಿದ್ದಾರೆ.

ಈ ಬಗ್ಗೆ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಸುಮಲತಾ ಅಂಬರೀಷ್, ನಿಮ್ಮೆಲ್ಲರ ಪ್ರಾರ್ಥನೆ, ಹಾರೈಕೆಯಿಂದ ಮೂರು ವಾರಗಳ ಕಡ್ಡಾಯ ಕ್ವಾರಂಟೈನ್ ಮುಗಿಸಿ, ಕೊವಿಡ್ ನಿಂದ ಸಂಪೂರ್ಣವಾಗಿ ಗುಣಮುಖಳಾಗಿದ್ದು, ಪರೀಕ್ಷೆಯ ನಂತರ ನಾನೀಗ ಕೋವಿಡ್19 ನೆಗೆಟಿವ್ ಎಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ. ವೈದ್ಯರ ಸಲಹೆಯಂತೆ ನಾಲಕ್ಕು ವಾರದ ವಿಶ್ರಾಂತಿ ಪಡೆದು, ನಿಮ್ಮೆಲ್ಲರ ಸೇವೆಗೆ ಮರಳಿ ಬರಲು ಕಾಯುತ್ತಿದ್ದೇನೆ ಎಂದಿದ್ದಾರೆ.
ಅಲ್ಲದೇ, ತಮ್ಮೊಂದಿಗೆ ಲವ ಲವಿಕೆಯಿಂದ ಬೆರೆಯಲು ನನಗೆ ಇನ್ನೂ ನಾಲ್ಕೈದು ವಾರ ಮನೆಯಲ್ಲೇ ವಿಶ್ರಾಂತಿ ಪಡೆಯಲು ವೈದ್ಯರು ನನಗೆ ಸಲಹೆ ನೀಡಿದ್ದಾರೆ. ದೇಹಕ್ಕೆ ಚೈತನ್ಯ ತುಂಬಲು ಮನೆಯಲ್ಲೇ ವಿಶ್ರಾಂತಿ ಪಡೆಯುವುದು ಅನಿವಾರ್ಯ.
ಕೊರೊನಾ ಪಾಸಿಟಿವ್ ಆದ ಸಮಯದಲ್ಲಿ ನೀವೆಲ್ಲ ನನಗಾಗಿ ಪ್ರಾರ್ಥಿಸಿದ್ದೀರಿ. ಶುಭ ಹಾರೈಸಿದ್ದೀರಿ. ಬೇಗ ಗುಣಮುಖ ಆಗುವಂತೆ ಶುಭಕೋರಿದ್ದೀರಿ. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಈಗ ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ. ಈ ಪ್ರೀತಿಗೆ ನಾನು ಋಣಿಯಾಗಿದ್ದೇನೆ.
ಜೊತೆಗೆ ದೇವರ ಅನುಗ್ರಹ ಮತ್ತು ವೈದ್ಯರಾದ ಡಾ.ಸತೀಶ್ ಅವರ ಚಿಕಿತ್ಸೆ ಮತ್ತು ಸಲಹೆ ನನ್ನಲ್ಲಿ ಸಾಕಷ್ಟು ಧೈರ್ಯ ತಂದವು. ಕೊರೊನಾ ಗೆದ್ದು ಬರುವಲ್ಲಿ ಸಹಕಾರಿಯಾದವು. ಆದಷ್ಟು ಬೇಗ ಮತ್ತೆ ನಿಮ್ಮ ಸೇವೆಗೆ ನಾನು ಬರಲು ಎದುರು ನೋಡುತ್ತಿದ್ದೇನೆ.


