ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವಂತೆ ಸುನೀಲ್ ಕುಮಾರ್ ಆಗ್ರಹ

Political News: ಸೆಪ್ಟೆಂಬರ್ 18 ರಂದು ರಾಜ್ಯ ಸರ್ಕಾರ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಲು ತೀರ್ಮಾನಿಸಿದೆ. ಇದಕ್ಕೆ ಸಂಬಂಧಿಸಿದಂತೆ ಕಾರ್ಕಳ ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು, ಈ ಸಭೆ ಬರೀ ಹೆಸರಿಗೆ ಮಾತ್ರ ಸಭೆಯಾಗಬಾರದು. ಕರಾವಳಿ ಜನರ ದಶಕಗಳ ಭಾವನಾತ್ಮಕ ಹಾಗೂ ನ್ಯಾಯಯುತ ಬೇಡಿಕೆಯಾದ ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ನಿರ್ಧಾರವನ್ನು ಈ ಸಂಪುಟ ಸಭೆಯಲ್ಲಿ ಸರ್ಕಾರ ಘೋಷಿಸಲೇಬೇಕೆಂದು ಸುನೀಲ್ ಕುಮಾರ್ ಆಗ್ರಹಿಸಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಆಗ್ರಹಿಸಿರುವ ಅವರು, ಸೆಪ್ಟೆಂಬರ್ 18 ರಂದು ರಾಜ್ಯ ಸರ್ಕಾರ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಸಲು ನಿರ್ಧರಿಸಿದೆ. ಆದರೆ, ಈ ಸಭೆ ಕೇವಲ ಔಪಚಾರಿಕತೆ ಹಾಗೂ ಘೋಷಣೆಗೆ ಸೀಮಿತವಾಗಬಾರದು. ಕರಾವಳಿ ಜನರ ದಶಕಗಳ ಭಾವನಾತ್ಮಕ ಹಾಗೂ ನ್ಯಾಯಯುತ ಬೇಡಿಕೆಯಾದ ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ನಿರ್ಧಾರವನ್ನು ಈ ಸಂಪುಟ ಸಭೆಯಲ್ಲಿ ಸರ್ಕಾರ ಘೋಷಿಸಲೇಬೇಕು ಎಂದು ನಾನು ಆಗ್ರಹಿಸುತ್ತೇನೆ ಎಂದು ಸುನೀಲ್ ಕುಮಾರ್ ಹೇಳಿದ್ದಾರೆ.

ತುಳು ಕೇವಲ ಒಂದು ಭಾಷೆಯಲ್ಲ, ಅದು ಕರಾವಳಿಯ ಆಚಾರ, ವಿಚಾರ, ದೈವಾರಾಧನೆ ಮತ್ತು ಸಂಸ್ಕೃತಿಯ ಜೀವಾಳ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ತುಳುವಿಗೆ ಅಧಿಕೃತ ಭಾಷೆಯ ಸ್ಥಾನಮಾನ ನೀಡುವ ಸಾಧ್ಯಾಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಡಾ.ಎಂ.ಮೋಹನ್ ಆಳ್ವ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು.

ಈ ಸಮಿತಿ ಸಮಗ್ರವಾಗಿ ಅಧ್ಯಯನ ನಡೆಸಿ, ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯ ಸ್ಥಾನಮಾನ ನೀಡಲು ಕಾನೂನಾತ್ಮಕವಾಗಿ ಹಾಗೂ ಸಾಂವಿಧಾನಿಕವಾಗಿ ಯಾವುದೇ ಅಡೆತಡೆಗಳಿಲ್ಲ ಎಂಬುದನ್ನು ಸ್ಪಷ್ಟಪಡಿಸಿ ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಿದೆ. ನಮ್ಮ ಸರ್ಕಾರ ಈ ಬಗ್ಗೆ‌ ಅಧಿಕೃತ ಘೋಷಣೆ ಮಾಡುವ ಹಂತದಲ್ಲಿದ್ದಾಗಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಸಾಧ್ಯವಾಗಲಿಲ್ಲ ಎಂದು ಸುನೀಲ್ ಕುಮಾರ್ ಹೇಳಿದ್ದಾರೆ.

ಈ ವಿಚಾರಕ್ಕೆ ಸಂಬಂಧಪಟ್ಟಂತೆ ಆಡಳಿತಾತ್ಮಕವಾಗಿ ಎಲ್ಲಾ ಸಿದ್ಧತೆಗಳು ಈಗಾಗಲೇ ಪೂರ್ಣಗೊಂಡಿವೆ. ಈಗ ಚೆಂಡು ರಾಜ್ಯ ಸರ್ಕಾರದ ಅಂಗಳದಲ್ಲಿದೆ. ಸೆಪ್ಟೆಂಬರ್ ೧೮ರ ಸಂಪುಟ ಸಭೆಯಲ್ಲಿ ಮೋಹನ್ ಆಳ್ವ ಸಮಿತಿಯ ವರದಿಯನ್ನು ಅನುಷ್ಠಾನಗೊಳಿಸಿ, ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ನಿರ್ಧಾರಕ್ಕಾಗಿ ತುಳು ನಾಡಿನ ಜನತೆ ಕಾಯುತ್ತಿದ್ದಾರೆ. ಈಡೇರಿಸಿ ಎಂದು ಸುನೀಲ್ ಕುಮಾರ್ ಆಗ್ರಹಿಸಿದ್ದಾರೆ.

About The Author