ಆಧಾರ್ ನವೀಕರಣಕ್ಕಾಗಿ ಮಕ್ಕಳು ಇನ್ಮುಂದೆ ಸೈಬರ್ ಸೆಂಟರ್‌ಗಳಲ್ಲಿ ಗಂಟೆಗಳಷ್ಟು ಸಾಲಿನಲ್ಲಿ ನಿಲ್ಲುವ ಅವಶ್ಯಕತೆ ಇಲ್ಲ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಾಲಾ–ಕಾಲೇಜುಗಳಲ್ಲೇ ಆಧಾರ್ ನವೀಕರಣ ಶಿಬಿರಗಳನ್ನು ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ವಿದ್ಯಾರ್ಥಿವೇತನ, ಪರೀಕ್ಷಾ ಅರ್ಜಿ ಹಾಗೂ ಇತರ ಸೇವೆಗಳ ವೇಳೆ ವಿದ್ಯಾರ್ಥಿಗಳು ಎದುರಿಸುತ್ತಿದ್ದ ಅಡೆತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ, 5ರಿಂದ 15 ವರ್ಷದೊಳಗಿನ ಶಾಲಾ ಮಕ್ಕಳ ಆಧಾರ್ ಬಯೋಮೆಟ್ರಿಕ್ ನವೀಕರಣವನ್ನು ಶೈಕ್ಷಣಿಕ ಸಂಸ್ಥೆಗಳಲ್ಲೇ ನಡೆಸಲು ಸರ್ಕಾರ ಸಜ್ಜಾಗಿದೆ. ಈ ಪ್ರಕ್ರಿಯೆಯನ್ನು 2026ರ ಮಾರ್ಚ್ 1ರೊಳಗೆ ಪೂರ್ಣಗೊಳಿಸುವಂತೆ ಗಡುವು ವಿಧಿಸಲಾಗಿದೆ.
ಹಾಗಾದ್ರೆ ಯಾಕೆ ಈ ನವೀಕರಣ ಅಗತ್ಯ? ಅನ್ನೋದನ್ನ ನೋಡೋದಾದ್ರೆ ಭಾರತ ವಿಶಿಷ್ಟ ಗುರುತಿನ ಪ್ರಾಧಿಕಾರ ಮಾರ್ಗಸೂಚಿಯ ಪ್ರಕಾರ 5 ವರ್ಷದ ಮಕ್ಕಳಿಗೆ ಆಧಾರ್ ಮಾಡಿಸುವಾಗ ಬೆರಳಚ್ಚು, ಭಾವಚಿತ್ರ ದಾಖಲಿಸಲಾಗಿರುತ್ತದೆ. 15 ವರ್ಷ ವಯಸ್ಸಿಗೆ ಬಂದಾಗ ಆಧಾರ್‌ನಲ್ಲಿ ಭಾವಚಿತ್ರ, ಬೆರಳಚ್ಚು ಸೇರಿದಂತೆ ವಿವಿಧ ಮಾಹಿತಿಗಳನ್ನು ಪರಿಷ್ಕರಣೆ ಮಾಡಬೇಕು. ಇದನ್ನು ಗಮನದಲ್ಲಿಟ್ಟು, ಸರ್ಕಾರ ಬೃಹತ್ ಮಟ್ಟದಲ್ಲಿ ನವೀಕರಣ ಪ್ರಕ್ರಿಯೆಯನ್ನು ಆರಂಭಿಸುತ್ತಿದೆ.
ಹಾಗಾದ್ರೆ ಏನೇನು ದಾಖಲೆಗಳು ಬೇಕು? ಮಗುವಿನ ಹಳೆಯ ಆಧಾರ್ ಕಾರ್ಡ್, ಮಗುವಿನ ಜನನ ಪ್ರಮಾಣ ಪತ್ರ, ಪೋಷಕರ, ಮಗುವಿನ ವಿಳಾಸ ದಾಖಲೆಗಳನ್ನ ಹೊಂದಿರಬೇಕು. ಮಕ್ಕಳು ಹಳೆಯ ಆಧಾರ್ ಹಾಗೂ ಮಗುವಿನ ಜನನ ಪ್ರಮಾಣ ಪತ್ರ ಸಲ್ಲಿಕೆ ಮಾಡುವ ಮೂಲಕ ಉಚಿತವಾಗಿಯೇ ನವೀಕರಣ ಮಾಡಿಸಲು ಅವಕಾಶ ನೀಡಲಾಗಿದೆ. ಶಾಲಾ ಶಿಕ್ಷಣ ಇಲಾಖೆ, ಇ-ಗವರ್ನೆನ್ಸ್, UIDAI ಸಂಸ್ಥೆ ಹಾಗೂ ಜಿ.ಪಂ. ಶಾಲಾ-ಕಾಲೇಜುಗಳಿಗೂ CEO ಸೇರಿ ಆಧಾರ್ ನವೀಕರಣದ ಕೆಲಸವನ್ನು ಸರಕಾರ ಹಂಚಿಕೆ ಮಾಡಿದೆ.
ವರದಿ : ಲಾವಣ್ಯ ಅನಿಗೋಳ




