ನವದೆಹಲಿ: ವಿಶ್ವಾಸಮತ ಸಾಬೀತುಪಡಿಸಲು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ನಿರ್ದೇಶನ ನೀಡುವಂತೆ ಪಕ್ಷೇತರರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಾಳೆಗೆ ಮುಂದೂಡಿಕೆ ಮಾಡಿದೆ.
ಇಂದು ಪಕ್ಷೇತರರ ಅರ್ಜಿ ವಿಚಾರಣೆ ಕೈಗೊಂಡ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮೊದಲಿಗೆ ಅತೃಪ್ತರ ಪರ ವಕೀಲ ಮುಕುಲ್ ರೋಹ್ಟಗಿ ವಾದವನ್ನು ಆಲಿಸಿದ್ರು. 15ಮಂದಿ ಅತೃಪ್ತ ಶಾಸಕರಿಗೆ ಸ್ಪೀಕರ್ ಎದುರು ವಿಚಾರಣೆಗೆ ಹಾಜರಾಗದಂತೆ ಸಲಹೆ ನೀಡಿರುವೆ. ಅವರೆಲ್ಲರಿಗೂ ಸಂಪೂರ್ಣ ರಕ್ಷಣೆಯಿದೆ ಎಂದರು. ಅಲ್ಲದೆ ವಿಪ್ ಹೆಸರಲ್ಲಿ ಶಾಸಕರು ಸದನಕ್ಕೆ ಹಾಜರಾಗಲೇಬೇಕೆಂದು ಒತ್ತಡ ಹೇರಬಾರದು ಅಂತ ರೋಹ್ಟಗಿ ಉಲ್ಲೇಖಿಸಿದ್ರು. ಇನ್ನು ವಿಚಾರಣೆಯನ್ನು ನಾಳೆಗೆ ಮುಂದೂಡೋಣವೆಂದು ನ್ಯಾಯಾಧೀಶರು ತಿಳಿಸಿದಾಗ ,ಇಂದೇ ವಿಶ್ವಾಸಮತ ಯಾಚನೆ ಮಾಡುವ ವಿಶ್ವಾಸ ನಮಗಿದೆ ಅಂತ ಹೇಳಿದ್ರು. ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಗೋಗೋಯ್ ಇದೇ ಆಶಾಭಾವನೆ ನಮಗೂ ಇದೆ ಎಂದರು.
ಸ್ಪೀಕರ್ ಪರ ವಕೀಲ ಅಭಿಷೇಕ್ ಮನಲುಸಿಂಘ್ವಿ ಕೂಡ ವಾದ ಮಂಡನೆ ಮಾಡಿದ್ರು ಸದನದಲ್ಲಿ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಹಾಗೂ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ರಾಜ್ಯಪಾಲರು ಮಧ್ಯದಲ್ಲಿ ನಿರ್ದೇಶನ ನೀಡುತ್ತಿದ್ದಾರೆ. ಈ ರೀತಿ ನಿರ್ದೇಶನ ನೀಡುವ ಹಾಗಿಲ್ಲ. ಅವರು ತರಾತುರಿಯಲ್ಲಿ ವಿಶ್ವಾಸಮತ ಯಾಚನೆಗೆ ಸೂಚನೆ ನೀಡುತ್ತಿರುವುದೇಕೆ ಅಂತ ಪ್ರಶ್ನಿಸಿದ್ರು. ಇನ್ನು ಅತೃಪ್ತರಿಗೆ ಸ್ಪೀಕರ್ ನೋಟೀಸ್ ನೀಡಿರುವ ಕುರಿತು ವಿಚಾರಣೆ ಬಾಕಿ ಇದೆ ಅಂತಲೂ ಸಿಂಘ್ವಿ ವಾದ ಮಂಡಿಸಿದ್ರು.
ಕೊನೆಯಲ್ಲಿ ವಾದ ಮಂಡಿಸಿದ ಸಿಎಂ ಪರ ವಕೀಲ ರಾಜೀವ್ ಧವನ್, ಇಂದಲ್ಲ ನಾಳೆ ವಿಶ್ವಾಸಮತ ಯಾಚನೆ ನಡೆಯಲಿದೆ. ಈ ಕುರಿತ ಪ್ರಕ್ರಿಯೆ ನಡೆಯುತ್ತಿದೆ. ವಿಧಾನಸಭೆಯಲ್ಲಿ ವಿತ್ತೀಯ ವಿಧೇಯಕ ಮಂಡನೆಯಾಗುವುದಿದೆ ಅಂತ ಧವನ್ ವಾದ ಮಂಡಿಸಿದ್ರು. ಈ ಮೂವರು ವಕೀಲರ ವಾದ ಆಲಿಸಿದ ಸುಪ್ರೀಂಕೋರ್ಟ್ ನ್ಯಾಯಾಧೀಶರು ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿಕೆ ಮಾಡಿ ಆದೇಶ ನೀಡಿದ್ದಾರೆ.