Tuesday, October 14, 2025

Latest Posts

Karnataka ;150 ಕೋಟಿ ಬಜೆಟ್ ಚನ್ನಪಟ್ಟಣ ಉಪಚುನಾವಣೆ : ಡಿಕೆ ಬ್ರದರ್ಸ್ ಎಂಟ್ರಿ, ಮೈತ್ರಿಯಲ್ಲಿ ಗೊಂದಲ

- Advertisement -

ರಾಮನಗರ : ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಇನ್ನೂ ಘೋಷಣೆ ಆಗಿಲ್ಲ. ಆದ್ರೆ ಈಗಾಗಲೇ ಕ್ಷೇತ್ರದಲ್ಲಿ ಚುನಾವಣಾ ಕಾವು ಜೋರಾಗಿದೆ. ಕುಮಾರಸ್ವಾಮಿ ಕೇಂದ್ರ ಸಚಿವರಾದ ಮೇಲೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ತಕ್ಷಣವೇ ಚನ್ನಪಟ್ಟಣಕ್ಕೆ ಕ್ಷೇತ್ರ ಪ್ರವಾಸ ಮಾಡಿದ ಡಿಸಿಎಂ ಡಿಕೆ ಶಿವಕುಮಾರ್ ಜನ ಒತ್ತಾಯ ಮಾಡಿದ್ರೆ ಚುನಾವಣೆಗೆ ಸ್ಪರ್ಧೆ ಮಾಡೋದಾಗಿ ಹೇಳಿ ಕಣ ರಂಗೇರುವಂತೆ ಮಾಡಿದ್ದಾರೆ. ಮರುದಿನ ಹೈಕಮಾಂಡ್ ತೀರ್ಮಾನಕ್ಕೆ ಬದ್ಧ ಅಂತ ಹೇಳುವ ಮೂಲಕ ಮತ್ತಷ್ಟು ಕುತೂಹಲಕ್ಕೆ ಡಿಕೆಶಿ ಕಾರಣವಾಗಿದ್ದಾರೆ.

ಡಿಕೆ ಸುರೇಶ್ ಸ್ಪರ್ಧೆ ಮಾಡುವಂತೆ ಕಾರ್ಯಕರ್ತರ ಒತ್ತಾಯ : ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಾ ಮಂಜುನಾಥ್ ವಿರುದ್ಧ ಸೋಲು ಕಂಡಿರುವ ಡಿಕೆ ಸುರೇಶ್ ಅವರನ್ನ ಚನ್ನಪಟ್ಟಣ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಕಾರ್ಯಕರ್ತರು ಒತ್ತಾಯ ಮಾಡ್ತಿದ್ದಾರೆ. ಆದ್ರೆ ಡಿ.ಕೆ ಸುರೇಶ್ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಆಸಕ್ತಿ ತೋರುತ್ತಿಲ್ಲ.

ಅಚ್ಚರಿ ಅಭ್ಯರ್ಥಿಯ ಬಗ್ಗೆ ಕಾಂಗ್ರೆಸ್ ನಲ್ಲಿ ಚರ್ಚೆ : ಮತ್ತೊಂದೆಡೆ ಕಾಂಗ್ರೆಸ್ ನಲ್ಲಿ ಡಿಕೆ ಬ್ರದರ್ಸ್ ಬದಲಾಗಿ ಅಚ್ಚರಿಯ ಅಭ್ಯರ್ಥಿ ಬಗ್ಗೆ ಚರ್ಚೆ ಆಗ್ತಿದೆ. ಕಳೆದ ವಾರ ಮಾಜಿ ಸಚಿವ ಸಿ.ಪಿ ಯೋಗೀಶ್ವರ್ ಮಾತನಾಡುತ್ತಾ ನಟ ದರ್ಶನ್ ಅವರನ್ನ ಚನ್ನಪಟ್ಟಣ ಉಪಚುನಾವಣೆಯಲ್ಲಿ ಅಚ್ಚರಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ನಾಯಕರು ಇದ್ದರು. ಆದ್ರೆ ಅವರು ಈಗ ಜೈಲು ಸೇರಿದ್ದಾರೆ ಅಂತ ಹೇಳಿದ್ರು. ದರ್ಶನ್ ಹೊರತುಪಡಿಸಿಯೂ ಕಾಂಗ್ರೆಸ್ ನಾಯಕರು ಈಗಲೂ ಅಚ್ಚರಿ ಅಭ್ಯರ್ಥಿ ಬಗ್ಗೆ ಮಾತನಾಡ್ತಿದ್ದಾರೆ. ಸಿ.ಪಿ ಯೋಗೀಶ್ವರ್ ಪುತ್ರಿ ನಿಶಾ ಬಗ್ಗೆ ಚರ್ಚೆ ಆಗ್ತಿದ್ರೂ ಆಕೆ ಪ್ರಬಲ ಸ್ಪರ್ಧಿ ಅಲ್ಲ ಅನ್ನೋದು ಡಿಕೆ ಬ್ರದರ್ಸ್ ಗೆ ಗೊತ್ತಿದೆ. ಮತ್ತೊಂದೆಡೆ ಜೆಡಿಎಸ್ ನಾಯಕ ಜಯಮುತ್ತುರನ್ನ ಕಾಂಗ್ರೆಸ್ ಗೆ ಕರೆತರುವ ಬಗ್ಗೆಯೂ ಚರ್ಚೆ ನಡೀತಿದೆ. ಈ ಹೆಸರುಗಳನ್ನೂ ಹೊರತುಪಡಿಸಿ ಅಚ್ಚರಿ ಅಭ್ಯರ್ಥಿ ಅಂತ ಕಾಂಗ್ರೆಸ್ ನಾಯಕರು ಹೇಳ್ತಿರೋದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಡಿಕೆ ಎಂಟ್ರಿಗೂ ಮೊದಲು ನಿಖಿಲ್ ಸ್ಪರ್ಧೆಗೆ ಕುಮಾರಸ್ವಾಮಿ ಒಲವು : ಇನ್ನು ಡಿಸಿಎಂ ಡಿಕೆ ಶಿವಕುಮಾರ್ ಚನ್ನಪಟ್ಟಣ ಎಂಟ್ರಿಗೂ ಮೊದಲು ನಿಖಿಲ್ ರನ್ನ ಉಪಚುನಾವಣೆ ಅಭ್ಯರ್ಥಿ ಮಾಡಲು ಒಲವು ತೋರಿದ್ರು. ಆದ್ರೆ ಡಿಕೆ ಚನ್ನಪಟ್ಣಣಕ್ಕೆ ಕಾಲಿಡ್ತಿದ್ದ ಹಾಗೆಯೇ ಕುಮಾರಸ್ವಾಮಿ ವರಸೆ ಬದಲಿಸಿ ಮೈತ್ರಿ ಅಭ್ಯರ್ಥಿ ಗೆಲ್ತಾರೆ ಅಂತ ಹೇಳೋಕೆ ಶುರುಮಾಡಿದ್ದಾರೆ. ಲೋಕಸಭೆ ಚುನಾವಣೆ ಗೆದ್ದು ಕೇಂದ್ರ ಮಂತ್ರಿಯಾಗಿ ಅತಿ ಉತ್ಸಾಹದಲ್ಲಿರುವ ಕುಮಾರಸ್ವಾಮಿ ಅಬ್ಬರ ಹೀಗೆ ಮುಂದುವರೆಯಬೇಕಾದರೆ ಚನ್ನಪಟ್ಟಣ ಉಪಚುನಾವಣೆ ಗೆಲ್ಲಲೇ ಬೇಕಿದೆ. ಹೀಗಾಗಿ ಕೇಂದ್ರ ಮಂತ್ರಿ ಕುಮಾರಸ್ವಾಮಿ ಹೊಸ ಲೆಕ್ಕಾಚಾರಕ್ಕೆ ಮುಂದಾಗಿದ್ದಾರೆ. ಇದು ಜೆಡಿಎಸ್ ಸ್ಥಾನ ಹೀಗಾಗಿ ಈ ಸೀಟು ಜೆಡಿಎಸ್ ಗೆ ಬೇಕು ಅಂತಿರುವ ಕುಮಾರಸ್ವಾಮಿ ಬಿಜೆಪಿ ನಾಯಕ ಸಿ.ಪಿ ಯೋಗೀಶ್ವರ್ ಅವರನ್ನೇ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವಂತೆ ಕೇಳಿದ್ದಾರೆ ಎನ್ನಲಾಗ್ತಿದೆ. ಮತ್ತೊಂದೆಡೆ ಜೆಡಿಎಸ್ ನಾಯಕ ಜಯಮುತ್ತು ಸಹ ಸ್ಪರ್ಧೆಗೆ ಆಸಕ್ತಿ ತೋರಿದ್ದಾರೆ ಆದ್ರೆ ಯೋಗೀಶ್ವರ್ ನಿರ್ಧಾರ ಸಹ ಬಹಳ ಮುಖ್ಯ ಅನ್ನೋದು ಕ್ಷೇತ್ರದ ಪರಿಸ್ಥಿತಿ.

ಯೋಗೀಶ್ವರ್ ಗೆ ಅವಕಾಶ ನೀಡದಂತೆ ಅಶ್ವಥ್ ನಾರಾಯಣ್, ಅಶೋಕ್ ಒತ್ತಡ : ಮತ್ತೊಂದೆಡೆ ಕನಕಪುರ ವಿಧಾನಸಭೆಯಲ್ಲಿ ಹೀನಾಯವಾಗಿ ಸೋತಿರುವ ಆರ್. ಅಶೋಕ್ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನ ಗೆಲ್ಲಿಸಲು ವಿಫಲವಾಗಿರುವ ಡಾ ಅಶ್ವಥ್ ನಾರಾಯಣ್ ಯಾವುದೇ ಕಾರಣಕ್ಕೂ ಯೋಗೀಶ್ವರ್ ಸ್ಪರ್ಧೇಗೆ ಅವಕಾಶ ಬೇಡ ನಿಖಿಲ್ ನಿಲ್ಲಿಸಿ ಗೆಲ್ಲಿಸೋಣ ಅಂತ ಕುಮಾರಸ್ವಾಮಿ ಬಳಿ ಹೇಳಿದ್ರಂತೆ. ಡಿಕೆ ಚನ್ನಪಟ್ಟಣ ಎಂಟ್ರಿಗೂ ಮೊದಲು ಕುಮಾರಸ್ವಾಮಿ ಸಹ ಬಿಜೆಪಿ ನಾಯಕರ ಸಲಹೆಯಂತೆ ನಿಖಿಲ್ ನಿಲ್ಲಿಸುವ ಬಗ್ಗೆ ಎಲ್ಲರಿಗೂ ಹೇಳುತ್ತಲೇ ಬಂದಿದ್ರಂತೆ.

ಸ್ಪರ್ಧೆಗೆ ಒಲವು ತೋರದ ಸಿ.ಪಿ ಯೋಗೀಶ್ವರ್ : ಬಿಜೆಪಿ ಎಂಎಲ್ ಸಿ ಯಾಗಿರುವ ಸಿ.ಪಿ ಯೋಗೀಶ್ವರ್ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ವಿರುದ್ಧವೇ ಸೋಲು ಕಂಡಿದ್ರು. ಆದ್ರೆ, ಯೋಗೀಶ್ವರ್ ಸದ್ಯಕ್ಕೆ ಉಪಚುನಾವಣೆ ಸ್ಪರ್ಧೆಗೆ ಆಸಕ್ತಿ ತೋರುತ್ತಿಲ್ಲ. ಜೆಡಿಎಸ್ ಕಾರ್ಯಕರ್ತರು ಸಂಪೂರ್ಣವಾಗಿ ಬೆಂಬಲಿಸುವ ಬಗ್ಗೆ ನಂಬಿಕೆ ಇಲ್ಲ ಜೊತೆಗೆ ಬಿಜೆಪಿಯ ಕೆಲ ಸ್ವಯಂ ಘೋಷಿತ ಒಕ್ಕಲಿಗ ನಾಯಕರ ವರ್ತನೆ ಬಗ್ಗೆಯೂ ಯೋಗೀಶ್ವರ್ ಬೇಸರ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಿ.ಪಿ ಯೋಗೀಶ್ವರ್ ಉಪಚುನಾವಣೆ ಸ್ಪರ್ಧೆ ಬಗ್ಗೆ ನಿರಾಸಕ್ತಿ ಹೊಂದಿದ್ದಾರೆ ಎನ್ನಲಾಗ್ತಿದೆ.

ಒಂದು ಮತಕ್ಕೆ 3000-5000: 100-150 ಕೋಟಿ ದಾಟಲಿದೆಯಂತೆ ಚುನಾವಣ ವೆಚ್ಚ : ಕಳೆದ ಲೋಕಸಭಾ ಚುನಾವಣೆ ವೇಳೆ ಒಂದು ಪಕ್ಷ ಮತಕ್ಕೆ 500 ರೂಪಾಯಿ ಕೊಟ್ರೆ ಮತ್ತೊಂದು ಅಭ್ಯರ್ಥಿ ಮತಕ್ಕೆ 1000 ನೀಡಿದ್ರಂತೆ. ಇನ್ನು ಈ ಬಾರಿ ಡಿಕೆ ಬ್ರದರ್ಸ್ ಸ್ಪರ್ಧೆ ಮಾಡಿದ್ರೆ ಮತ ಖರೀದಿ ಭರಾಟೆ ಜೋರಾಗಲಿದೆ ಅಂತ ಚರ್ಚೆಯಾಗ್ತಿದೆ. ಒಂದು ಮತಕ್ಕೆ ಕನಿಷ್ಟ 3000 ದಿಂದ 5000 ದಾಟಿದ್ರೂ ಆಶ್ಚರ್ಯ ಇಲ್ಲ ಅನ್ನೋದು ಚನ್ನಪಟ್ಟಣ ರಾಜಕೀಯ ಪಂಟರ್ ಗಳ ಮಾತು.

2023 ಡಿಕೆ ಬ್ರದರ್ಸ್ ಬೆಂಬಲದಿಂದಲೇ ಗೆಲುವು ಸಾಧಿಸಿದ್ದ ಕುಮಾರಸ್ವಾಮಿ : ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕುಮಾರಸ್ವಾಮಿ ಬಿಜೆಪಿ ಅಭ್ಯರ್ಥಿ ಸಿ.ಪಿ ಯೋಗೀಶ್ವರ್ ವಿರುದ್ಧ ಗೆಲುವು ಸಾಧಿಸಿದ್ರು. ಬಿಜೆಪಿ ಅಭ್ಯರ್ಥಿ ಸಿ.ಪಿ ಯೋಗೀಶ್ವರ್ ಗೆಲ್ಲಬಾರದು ಅನ್ನೋ ಕಾರಣಕ್ಕೆ 25 ಸಾವಿರದಷ್ಟು ಮುಸ್ಲಿಂ ಮತಗಳು ಜೆಡಿಎಸ್ ಅಭ್ಯರ್ಥಿ ಕುಮಾರಸ್ವಾಮಿಗೆ ಚಲಾವಣೆ ಆಗಿದ್ದವು. ಕಾಂಗ್ರೆಸ್ ಅಭ್ಯರ್ಥಿ ಕೇವಲ 14 ಸಾವಿರ ಮತಗಳನ್ನ ಮಾತ್ರ ಪಡೆದಿದ್ರು. ಒಂದು ವೇಳೆ ಮುಸ್ಲಿಂ ಮತಗಳು ಕಾಂಗ್ರೆಸ್ ಅಭ್ಯರ್ಥಿಗೆ ಚಲಾವಣೆಯಾಗಿದ್ರೆ ಕುಮಾರಸ್ವಾಮಿ 2023ರ ವಿಧಾನಸಭಾ ಚುನಾವಣೆಯಲ್ಲಿ ಸಿ.ಪಿ ಯೋಗೀಶ್ವರ್ ವಿರುದ್ಧ ಸೋಲು ಕಾಣಬೇಕಾಗಿತ್ತು.

2023 ಚನ್ನಪಟ್ಟಣ ವಿಧಾನಸಭಾ ಫಲಿತಾಂಶ
ಹೆಚ್.ಡಿ ಕುಮಾರಸ್ವಾಮಿ – JDS – 96,592 ಮತಗಳು
ಸಿ.ಪಿ ಯೋಗೀಶ್ವರ್ – BJP – 80,677
ಗಂಗಾಧರ್ – CONGRESS – 15,374

2024 ಬೆಂಗಳೂರು ಗ್ರಾ ಲೋಕಸಭಾ ಫಲಿತಾಂಶ ( ಚನ್ನಪಟ್ಟಣ ವಿ ಕ್ಷೇತ್ರ )
ಡಾ ಮಂಜುನಾಥ್ – ಬಿಜೆಪಿ – 1,06,971
ಡಿಕೆ ಸುರೇಶ್ – ಕಾಂಗ್ರೆಸ್ – 85,357

ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ & ಬಿಜೆಪಿ ಮತಗಳನ್ನ ಒಟ್ಟುಗೂಡಿಸಿದ್ರೆ 1,77,000 ಕ್ಕೂ ಮತಗಳು ಆಗುತ್ವೆ. ಆದ್ರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ ಮಂಜುನಾಥ್ ಅವರಿಗೆ ಚಲಾವಣೆಯಾದ 1,06,971 ಮತಗಳು. ವಿಧಾನಸಭೆಯಲ್ಲಿ 15 ಸಾವಿರ ಮತ ಪಡೆದಿದ್ದ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ 85,000ಕ್ಕೂ ಅಧಿಕ ಮತಗಳನ್ನ ಪಡೆದಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಡಾ ಮಂಜುನಾಥ್ 21 ಸಾವಿರಕ್ಕೂ ಅಧಿಕ ಮತಗಳನ್ನ ಪಡೆದಿದ್ದರೂ ವಿಧಾನಸಭಾ ಚುನಾವಣೆಗೆ ಹೊಲಿಕೆ ಮಾಡಿದ್ರೆ ಮೈತ್ರಿ ಅಭ್ಯರ್ಥಿಗೆ 70 ಸಾವಿರ ಮತಗಳು ಕಡಿಮೆಯಾಗಿದೆ. ಆ 70 ಸಾವಿರ ಮತಗಳು ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಪಡೆಯುವಲ್ಲಿ ಸಫಲರಾಗಿದ್ದಾರೆ. ಬಹುತೇಕ 100% ಮುಸ್ಲಿಂ ಮತಗಳು ಜೆಡಿಎಸ್ ಬುಟ್ಟಿಯಿಂದ ಕಾಂಗ್ರೆಸ್ ಪಾಲಾಗಿದ್ರೆ ಜೆಡಿಎಸ್ ಹಾಗೂ ಯೋಗೀಶ್ವರ್ ಪರವಾಗಿದ್ದ ದಲಿತ ಮತಗಳು ಕಾಂಗ್ರೆಸ್ ಗೆ ಚಲಾವಣೆಯಾಗಿದೆ. ಹಾಗೆ ನೋಡಿದ್ರೆ ಮುಂಬರುವ ಚನ್ನಪಟ್ಟಣ ಉಪಚುನಾವಣೆಯಲ್ಲಿ ಲೋಕಸಭೆಯಂತೆ ಮೈತ್ರಿ ಪಕ್ಷದ ಅಭ್ಯರ್ಥಿ 1 ಲಕ್ಷ ಮತಗಳನ್ನ ದಾಟುವ ಸಾಧ್ಯತೆ ತೀರ ಕಡಿಮೆ. ಇದು ಡಿಕೆ ಬ್ರದರ್ಸ್ ಗೆ ಮೈತ್ರಿ ಪಕ್ಷವನ್ನ ಸೋಲುಸಲು ಕಷ್ಟ ಆಗುವುದಿಲ್ಲ ಅನ್ನೋದು ಬಹುತೇಕರ ಅಭಿಪ್ರಾಯ. ಡಾ ಮಂಜುನಾಥ್ ದೇವೇಗೌಡರ ಅಳಿಯ ಹೀಗಾಗಿ ಲೋಕಸಭೆಯಲ್ಲಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿದ್ದಾರೆ. ಆದ್ರೆ, ಉಪಚುನಾವಣೆಯ ಸಂದರ್ಭದಲ್ಲಿ ಇದೇ ಲೆಕ್ಕಾಚಾರ ಮುಂದುವರೆಯುತ್ತೆ ಅನ್ನೋದು ಅನುಮಾನ.

ಸಂಪಾದಕೀಯ : ಕೆ.ಎಂ ಶಿವಕುಮಾರ್ ( ಬೆಸಗರಹಳ್ಳಿ )

- Advertisement -

Latest Posts

Don't Miss