Hubli News: ಹುಬ್ಬಳ್ಳಿ: ಹೆಸ್ಕಾಂ ಇಲಾಖೆಯನ್ನು ಮಾದರಿ ಇಲಾಖೆಯನ್ನಾಗಿ ಮಾಡಲು ಪಣ ತೊಟ್ಟು ಕೆಲಸ ಮಾಡುತ್ತೇನೆ ಎಂದು ಸೈಯದ್ ಅಜ್ಜಂಪೀರ ಖಾದ್ರಿ ಹೇಳಿದರು.
ಇಂದು ನವನಗರದ ಹೆಸ್ಕಾಂ ಕಚೇರಿಯಲ್ಲಿ ಹೆಸ್ಕಾಂ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.
ರೈತ ದೇಶದ ಬೆನ್ನೆಲುಬು. ರೈತರಿಗೆ ಸಮಯಕ್ಕೆ ಸರಿಯಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಭಾರತ ದೇಶದಲ್ಲಿ ಗೃಹ ಜ್ಯೋತಿ ಯೋಜನೆ ಮಾದರಿಯಾಗಿದೆ. ಇಲಾಖೆ ಅಧಿಕಾರಿಗಳ ಸಹಕಾರ ತೆಗೆದುಕೊಂಡು ಕಾರ್ಯನಿರ್ವಹಿಸುತ್ತೇನೆ. ಹೆಸ್ಕಾಂ ವ್ಯಾಪ್ತಿಯ ಪ್ರದೇಶಗಳಿಗೆ ಸಂಚರಿಸಿ, ಸಮಸ್ಯೆಗಳನ್ನು ಪರಿಹರಿಸಲಾಗುವುದು. ನಮ್ಮ ಸರ್ಕಾರ ಬಡವರು, ರೈತರು ಮತ್ತು ಕೂಲಿ ಕಾರ್ಮಿಕರ ಪರವಾಗಿದೆ. ಹೆಸ್ಕಾಂ ಸಂಸ್ಥೆ ಒಳ್ಳೆಯ ಕೆಲಸ ಮಾಡುವ ಸಂಸ್ಥೆಯಾಗಿರುತ್ತದೆ. ನನಗೆ ನೀಡಿರುವ ಜವಾಬ್ದಾರಿಯನ್ನು ಅರಿತು ಕೆಲಸ ಮಾಡುತ್ತೇನೆ ಎಂದರು.
ವಿವಿಧ ಧರ್ಮಗಳ ಧರ್ಮ ಗುರುಗಳು ಆರ್ಶೀವಚನ ನೀಡಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ತಮ್ಮ ಕಚೇರಿಯಲ್ಲಿ ಸೈಯದ್ ಅಜ್ಜಂಪೀರ ಖಾದ್ರಿ ಅವರು ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ವೈಶಾಲಿ ಎಂ.ಎಲ್. ಅವರಿಂದ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ, ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಎಸ್ ಪಾಟೀಲ, ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾದ ಬಿ.ಝೆಡ್. ಜಮೀರ್ ಅಹ್ಮದ್ ಖಾನ್, ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಪ್ರಸಾದ್ ಅಬ್ಬಯ್ಯ, ಶಾಸಕರಾದ ಶ್ರೀನಿವಾಸ ಮಾನೆ, ಯಾಸೀರ್ ಖಾನ್ ಪಠಾಣ, ಮಾಜಿ ಸಚಿವರಾದ ಎ.ಎಂ.ಹಿಂಡಸಗೇರಿ, ಮಾಜಿ ಸಂಸದರಾದ ಪ್ರೊ.ಐ.ಜಿ.ಸನದಿ ಸೇರಿದಂತೆ ಹೆಸ್ಕಾಂ ಇಲಾಖೆಯ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು.