ಆಡಳಿತದಲ್ಲಿ ಹೊಸ ಕ್ರಾಂತಿ ಮಾಡಿದ ದಳಪತಿ ವಿಜಯ್!

ತಮಿಳುನಾಡು ಮುಖ್ಯಮಂತ್ರಿ ವಿಜಯ್‌ ದಳಪತಿ ಅವರು ಸರ್ಕಾರಿ ಕಚೇರಿಗಳಲ್ಲಿ ವರ್ಷಗಳಿಂದ ನಡೆದುಬಂದಿದ್ದ ‘ವಿಐಪಿ ಸಂಸ್ಕೃತಿ’ಗೆ ತೆರೆ ಎಳೆಯುವತ್ತ ಹೆಜ್ಜೆ ಇಟ್ಟಿದ್ದಾರೆ. ಮುಖ್ಯಮಂತ್ರಿಯವರ ಕುರ್ಚಿಯ ಮೇಲೆ ಹಾಕಲಾಗುತ್ತಿದ್ದ ಬಿಳಿ ಹೊದಿಕೆಯನ್ನು ತೆಗೆದುಹಾಕಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಈ ಬೆಳವಣಿಗೆಗೆ ಕಾರಣವಾಗಿದ್ದು 14 ವರ್ಷದ ಹವಾಮಾನ ಹೋರಾಟಗಾರ್ತಿ ಲಿಸಿಪ್ರಿಯಾ ಕಂಗುಜಮ್ ಮಾಡಿದ ಮನವಿ. ʼಭಾರತದಲ್ಲಿ ವಿಐಪಿ ಕುರ್ಚಿಗಳ ಮೇಲೆ ಹೊದಿಕೆ ಹಾಕುವ ಸಂಸ್ಕೃತಿಯನ್ನು ನಿಲ್ಲಿಸಬಹುದೇ?ʼ ಎಂದು ವಿಜಯ್‌ ಅವರನ್ನು ಉದ್ದೇಶಿಸಿ ಎಕ್ಸ್‌ ಖಾತೆಯಲ್ಲಿ ಅವರು ಪ್ರಶ್ನಿಸಿದ್ದರು. ಸಚಿವರು, ಅಧಿಕಾರಿಗಳು ಮಾತ್ರವಲ್ಲದೆ ಕಿರಿಯ ಹುದ್ದೆಯ ಅಧಿಕಾರಿಗಳೂ ಈ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದರು.

ಇದಾದ ಕೆಲವೇ ಗಂಟೆಗಳಲ್ಲಿ ಮುಖ್ಯಮಂತ್ರಿಗಳ ಕಚೇರಿಯಿಂದ ಬಿಡುಗಡೆಗೊಂಡ ಹೊಸ ಚಿತ್ರಗಳಲ್ಲಿ ವಿಜಯ್‌ ಕುಳಿತಿದ್ದ ಕುರ್ಚಿಯ ಮೇಲೆ ಬಿಳಿ ಟವೆಲ್‌ ಕಾಣಿಸದಿರುವುದು ಎಲ್ಲರ ಗಮನ ಸೆಳೆದಿದೆ. ಯಾವುದೇ ಅಧಿಕೃತ ಘೋಷಣೆ ಮಾಡದೇ, ಮೌನವಾಗಿ ಈ ಬದಲಾವಣೆ ತಂದಿರುವುದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ʼಜನರ ಧ್ವನಿಗೆ ಸ್ಪಂದಿಸುವ ನಾಯಕʼ ಎಂದು ಹಲವರು ಪ್ರಶಂಸಿಸಿದ್ದಾರೆ.

ಸರ್ಕಾರಿ ಕಚೇರಿಗಳಲ್ಲಿ ಕುರ್ಚಿಗಳ ಮೇಲೆ ಬಿಳಿ ಟವೆಲ್‌ ಹಾಕುವ ಪದ್ಧತಿ ಬ್ರಿಟಿಷರ ಕಾಲದಿಂದಲೂ ನಡೆದುಕೊಂಡು ಬಂದಿದೆ ಎನ್ನಲಾಗುತ್ತದೆ. ಬಿಸಿಲಿನ ವಾತಾವರಣದಲ್ಲಿ ಬೆವರು ಹೀರಿಕೊಳ್ಳುವುದು ಹಾಗೂ ಕುರ್ಚಿಗಳನ್ನು ಸ್ವಚ್ಛವಾಗಿಡುವುದು ಇದರ ಮೂಲ ಉದ್ದೇಶವಾಗಿತ್ತು. ಆದರೆ ಕಾಲಕ್ರಮೇಣ ಅದು ಅಧಿಕಾರ, ಹುದ್ದೆ ಹಾಗೂ ವಿಐಪಿ ಸಂಸ್ಕೃತಿಯ ಸಂಕೇತವಾಗಿ ರೂಪಾಂತರಗೊಂಡಿತ್ತು.

ಇದೀಗ ವಿಜಯ್‌ ತೆಗೆದುಕೊಂಡಿರುವ ಈ ಸಣ್ಣ ನಿರ್ಧಾರ ಆಡಳಿತದಲ್ಲಿ ಸರಳತೆ ಮತ್ತು ಸಮಾನತೆಯ ಸಂದೇಶ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಹೊಸ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ ನಂತರ ವಿಜಯ್‌ ಕೈಗೊಂಡಿರುವ ಈ ಕ್ರಮ, ಸಾಮಾನ್ಯ ಜನರೊಂದಿಗೆ ಹತ್ತಿರವಾಗಿರುವ ನಾಯಕ ಎಂಬ ಅವರ ಇಮೇಜ್‌ನ್ನು ಮತ್ತಷ್ಟು ಬಲಪಡಿಸಿದೆ.

About The Author