ಟ್ರಿನಿಡಾಡ್: ಶಿಖರ್ ಧವನ್ ಅವರ ನಾಯಕನ ಆಟ ಮತ್ತು ಮೊಹ್ಮದ್ ಸಿರಾಜ್ ಅವರ ಸೊಗಸಾದ ಬೌಲಿಂಗ್ ನೆರೆವಿನಿಂದ ಭಾರತ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ 3 ರನ್ ಗಳ ರೋಚಕ ಗೆಲುವು ಪಡೆದಿದೆ.
ಪೋರ್ಟ್ ಆಫ್ ಸ್ಪೇನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಫೀಲ್ಡಿಂಗ್ ಆಯ್ದುಕೊಮಡಿತು. ಭಾರತ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 308 ರನ್ ಗಳಿಸಿತು. ವೆಸ್ಟ್ ಇಂಡೀಸ್ ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 305 ರನ್ ಗಳಿಸಿ ವಿರೋಚಿತ ಸೋಲು ಅನುಭವಿಸಿತು.
309 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ ವಿಂಡೀಸ್ಗೆ ಉತ್ತಮ ಆರಂಭ ಸಿಗಲಿಲ್ಲ.ಶಾಯ್ ಹೋಪ್ 7, ಎರಡನೆ ವಿಕೆಟ್ ಗೆ ಜೊತೆಗೂಡಿದ ಕೈಲೆ ಮೇಯರ್ಸ್ (75 ರನ್) ಶಾಮರ್ಹ ಬ್ರೂಕ್ಸ್ (46 ರನ್) 117 ರನ್ ಸೇರಿಸಿದರು.
ಈ ವೇಳೆ ದಾಳಿಗಿಳಿದ ವೇಗಿ ಶಾರ್ದೂಲ್ ಠಾಕೂರ್ ಬ್ರೂಕ್ಸ್ ಅವರನ್ನು ಪೆವಲಿಯನ್ ಗೆ ಅಟ್ಟಿದರು. ನಂತರ ಕೈಲೆ ಮೇಯರ್ಸ್ ಅವರನ್ನು ಬಲಿತೆಗೆದುಕೊಂಡರು. ಬ್ರಾಂಡನ್ ಕಿಂಗ್ 54,ನಿಕೊಲೊಸ್ ಪೂರಾನ್ 25, ರೊವಮನ್ ಪೊವೆಲ್ 6 ರನ್ ಗಳಿಸಿದರು.
ಕೊನೆಯ ಓವರ್ ನಲ್ಲಿ ವಿಂಡೀಸ್ ಗೆ 15 ರನ್ ಬೇಕಿತ್ತು. ಕೊನೆಯ ಓವರ್ ಮಾಡಿದ ಸಿರಾಜ್ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಅಖಿಲ್ ಹುಸೇನ್ ಅಜೇಯ 32, ರೊಮಾರಿಯೊ ಶೆಪಾರ್ಡ್ ಅಜೇಯ 39 ರನ್ ಗಳಿಸಿದರು. ಭಾರತ ಪರ ಸಿರಾಜ್, ಶಾರ್ದೂಲ್ ಠಾಕೂರ್ ಮತ್ತು ಚಾಹಲ್ ತಲಾ 2 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಭಾರತ ಪರ ನಾಯಕ ಶಿಖರ್ ಧವನ್ 97, ಶುಭಮನ್ ಗಿಲ್ 64, ಶ್ರೇಯಸ್ ಅಯ್ಯರ್ 54, ಸೂರ್ಯ ಕುಮಾರ್ 13, ಸ್ಯಾಮ್ಸನ್ 12, ದೀಪಕ್ ಹೂಡಾ 27, ಅಕ್ಷರ್ ಪಟೇಲ್ 21, ಶಾರ್ದೂಲ್ ಠಾಕೂರ್ ಅಜೇಯ 7 ರನ್ ಗಳಿಸಿದರು.




