ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ, ವಿಶ್ವಕಪ್ ಗೆಲ್ಲುವ ಹಾಟ್ ಫೇವರಿಟ್ ತಂಡವಾಗಿದೆ. ಈಗಾಗಲೇ ತಂಡ ಸೆಮಿಫೈನಲ್ ತಲುಪಿದ್ದು, ಅಂತಿಮ ನಾಲ್ಕರಘಟ್ಟದಲ್ಲಿ ಬ್ಲೂ ಬಾಯ್ಸ್ ಗೆ ಎದುರಾಳಿ ಯಾರು ಅನ್ನೋದು ಸಾಕಷ್ಟು ಕುತೂಹಲ ಹುಟ್ಟುಹಾಕಿದೆ. ಭಾರತವೂ ಸೇರಿದಂತೆ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್ ತಲುಪಿವೆ. ಈ ನಡುವೆ ಸೆಮೀಸ್ ನಲ್ಲಿ ಭಾರತಕ್ಕೆ ಎದುರಾಳಿ ಯಾರು ಅನ್ನೋದು ಬಿಸಿ ಬಿಸಿ ಚರ್ಚೆಯ ವಿಷಯವಾಗಿದೆ.
ಆಸ್ಟ್ರೇಲಿಯಾದ ಬಳಿ ಈಗಾಗಲೇ 14 ಅಂಕಗಳಿದ್ರೆ, ಭಾರತದ ಬಳಿ 13 ಅಂಕಗಳಿವೆ. ಇಂದು ಭಾರತ ತಂಡ ಶ್ರೀಲಂಕಾ ಎದುರು ಅಂತಿಮ ಲೀಗ್ ಪಂದ್ಯವನ್ನಾಡುತ್ತಿದೆ. ಮತ್ತೊಂದು ಕಡೆ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಮ್ಮ ಕೊನೆಯ ಲೀಗ್ ಪಂದ್ಯನ್ನಾಡುತ್ತಿವೆ. ಇಂದು ನಡೆಯಲಿರುವ ಪಂದ್ಯಗಳಲ್ಲಿ ಭಾರತ, ಶ್ರೀಲಂಕಾ ವಿರುದ್ಧ ಗೆದ್ದರೆ 15 ಅಂಕ ಗಳಿಸುತ್ತದೆ. ಹಾಗೂ ಕಾಂಗರೂಗಳು ಹರಿಣಗಳ ವಿರುದ್ಧ ಸೋಲುಂಡರೆ 14 ಅಂಕ ಹೊಂದುವ ಮೂಲಕ ಎರಡನೇ ಸ್ಥಾನಕ್ಕೆ ಕುಸಿಯಬೇಕಾಗುತ್ತದೆ.
ಒಂದು ವೇಳೆ ಹೀಗೆ ಆದಲ್ಲಿ ಭಾರತ, ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಲಿದೆ. ಹಾಗಾಗಿ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್, ಭಾರತಕ್ಕೆ ಎದುರಾಳಿ ಆಗಬಹುದು ಎನ್ನುವ ಲೆಕ್ಕಚಾರ ಕ್ರಿಕೆಟ್ ತಜ್ಞರದ್ದು.. ಒಂದು ವೇಳೆ ದಕ್ಷಿಣ ಆಫ್ರಿಕಾ ಎದುರು ಆಸ್ಟ್ರೇಲಿಯಾ ಗೆಲುವು ದಾಖಲಿಸಿದಲ್ಲಿ, ಪಟ್ಟಿಯಲ್ಲಿ ಆಸಿಸ್ ಅಗ್ರಸ್ಥಾನದಲ್ಲಿ ಮುಂದುವರೆಯಲಿದ್ದು, ಸೆಮಿಫೈನಲ್ ನಲ್ಲಿ ಭಾರತದ ಎದುರಾಳಿಯಾಗಿ ಮೂರನೇ ಸ್ಥಾನದಲ್ಲಿರುವ ಇಂಗ್ಲೆಂಡ್ ಕಣಕ್ಕಿಳಿಯಲಿದೆ.
ನಂದನ್, ಸ್ಪೋರ್ಟ್ಸ್ ಬ್ಯೂರೋ, ಕರ್ನಾಟಕ ಟಿವಿ