ಭಾರತಕ್ಕೆ ಬಹು ನಿರೀಕ್ಷಿತ ಟೆಸ್ಲಾ ಕಾರು ಎಂಟ್ರಿಯಾಗಿದೆ. ಟೆಸ್ಲಾ ಮಾಡೆಲ್ Y ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದ್ದು, ಎರಡು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಮೂಲ ರಿಯರ್-ವೀಲ್ ಡ್ರೈವ್ (RWD) ವೇರಿಯೆಂಟ್ ಬೆಲೆ ರೂ. 59.89 ಲಕ್ಷ ದಿಂದ ಪ್ರಾರಂಭವಾಗುತ್ತದೆ. ಲಾಂಗ್ ರೇಂಜ್ RWD ವೇರಿಯೆಂಟ್ ಬೆಲೆ ರೂ. 67.89 ಲಕ್ಷ ಇದೆ. ಬುಕಿಂಗ್‌ಗಳು ತೆರೆದಿದ್ದು, ರೂ. 22,220 ಟೋಕನ್ ಮೊತ್ತದೊಂದಿಗೆ ಬುಕ್ ಮಾಡಿಕೊಳ್ಳಬಹುದು. ಆರಂಭಿಕ ಮಾಡಲ್‌ಗಳನ್ನು ಚೀನಾದಲ್ಲಿರುವ ಟೆಸ್ಲಾದ ಶಾಂಘೈ ಗಿಗಾಫ್ಯಾಕ್ಟರಿಯಿಂದ ಕಂಪ್ಲೀಟ್ ಬಿಲ್ಟ್ ಯೂನಿಟ್‌ಗಳಾಗಿ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ.
ಭಾರತದ ಹೆಚ್ಚಿನ ಆಮದು ಸುಂಕಗಳು ಮತ್ತು ಲಾಜಿಸ್ಟಿಕ್ಸ್ ವೆಚ್ಚಗಳಿಂದಾಗಿ, ದೇಶದಲ್ಲಿ ಮಾಡೆಲ್ ವೈ’ನ ಆರಂಭಿಕ ಬೆಲೆ ಅಮೆರಿಕಾ, ಚೀನಾ ಹಾಗೂ ಜರ್ಮನಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ಭಾರತದಲ್ಲಿ ಆನ್-ರೋಡ್ ಬೆಲೆಯು ಅಂದಾಜು 61.07 ಲಕ್ಷ ರೂ. ಹಾಗೂ ಲಾಂಗ್-ರೇಂಜ್ ಆವೃತ್ತಿಯು 69.15 ಲಕ್ಷ ಬೆಲೆಯಲ್ಲಿ ಸಿಗಬಹುದಾಗಿದೆ.
ಬ್ರ್ಯಾಂಡ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಶೇ 18 GST ಸೇರಿದಂತೆ 50,000 ರೂ. ಆಡಳಿತ ಮತ್ತು ಸೇವಾ ಶುಲ್ಕ ಸೇರಿದೆ. ಮಾಡೆಲ್ ವೈ ಕಾರಿನ ಆರಂಭಿಕ ಬೆಲೆ ಅಮೆರಿಕದಲ್ಲಿ $44,990 ಅಂದರೆ ಸುಮಾರು ರೂ. 38.63 ಲಕ್ಷ, ಚೀನಾದಲ್ಲಿ 263,500 ಯುವಾನ್ ಅಂದರೆ ಸುಮಾರು ರೂ. 31.57 ಲಕ್ಷ ಮತ್ತು ಜರ್ಮನಿಯಲ್ಲಿ 45,970 ಯುರೋಗಳು ಅಂದರೆ ಸುಮಾರು ರೂ. 46.09 ಲಕ್ಷ ಇದೆ. ವಿದೇಶಗಳಲ್ಲಿ ಇಷ್ಟು ಕಡಿಮೆ ಬೆಲೆಗೆ ಲಭ್ಯವಿರುವ ಕಾರು ಭಾರತದಲ್ಲಿ ಹೆಚ್ಚಿನ ಆಮದು ಸುಂಕಗಳು ಮತ್ತು ಲಾಜಿಸ್ಟಿಕ್ಸ್ ವೆಚ್ಚಗಳಿಂದಾಗಿ ದುಬಾರಿಯಾಗಿದೆ.
ಟೆಸ್ಲಾ ಕಂಪನಿಯು ಮುಂಬೈ ಬಳಿಕ, ನವದೆಹಲಿಯಲ್ಲಿಯೂ ನೂತನ ಶೋರೂಂ ಅನ್ನು ತೆರೆಯಲು ಸಜ್ಜಾಗಿದೆ. ನಂತರ ಬೆಂಗಳೂರು, ಹೈದರಾಬಾದ್, ಕೋಲ್ಕತ್ತಾ ಹಾಗೂ ಚೆನ್ನೈ ಮಹಾನಗರಗಳಲ್ಲಿ ಶೋರೂಂನ್ನು ಆರಂಭ ಮಾಡಲಿದೆ ಎನ್ನಲಾಗಿದೆ. ಮಾಡೆಲ್ ವೈ ನಂತರ ಮಾಡೆಲ್ ಎಸ್, ಮಾಡೆಲ್ 3, ಮಾಡೆಲ್ ಎಕ್ಸ್ ಮತ್ತು ಸೈಬರ್‌ಟ್ರಕ್ ಒಳಗೊಂಡಂತೆ ಹತ್ತಾರು ಕಾರುಗಳನ್ನು ಭಾರತಕ್ಕೆ ತರುವ ನಿರೀಕ್ಷೆಯಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ