Friday, November 21, 2025

Latest Posts

ಮೋದಿ ಹೊಗಳಿದ ತರೂರ್, ಕಾಂಗ್ರೆಸ್ ಒಳಗೆ ಭಾರಿ ಬಿರುಗಾಳಿ!

- Advertisement -

ತಿರುವನಂತಪುರಂ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಇತ್ತೀಚಿನ ರಾಮನಾಥ್ ಗೋಯೆಂಕಾ ಉಪನ್ಯಾಸವನ್ನು ಶ್ಲಾಘಿಸಿದ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಒಳಗೆ ಮತ್ತೆ ವಿವಾದ ಜೋರಾಗಿದೆ. ಮಂಗಳವಾರ X‌ನಲ್ಲಿ ತರೂರ್ ಹಂಚಿಕೊಂಡ ಪೋಸ್ಟ್‌ಗೆ ಕಾಂಗ್ರೆಸ್ ನಾಯಕರು ಕಿಡಿ ಕಾರಿದ್ದಾರೆ.

ತರೂರ್ ತಮ್ಮ ಪೋಸ್ಟ್‌ನಲ್ಲಿ, ಇಂಡಿಯನ್ ಎಕ್ಸ್‌ಪ್ರೆಸ್ ಆಯೋಜಿಸಿದ್ದ ಉಪನ್ಯಾಸದಲ್ಲಿ ಪ್ರಧಾನಿ ಮೋದಿ ‘ವಿಕಾಸಕ್ಕಾಗಿ ರಚನಾತ್ಮಕ ಅಸಹನೆ ಅಗತ್ಯ’, ‘ವಸಾಹತುಶಾಹಿ ಮನೋಭಾವದಿಂದ ಹೊರಬರಬೇಕಿದೆ’, ಮತ್ತು ಭಾರತ ಈಗ ಉದಯೋನ್ಮುಖ ಮಾರುಕಟ್ಟೆ ಮಾತ್ರವಲ್ಲ, ಜಗತ್ತಿಗೆ ಉದಯೋನ್ಮುಖ ಮಾದರಿ ಎಂದು ಹೇಳಿದುದನ್ನು ಮೆಚ್ಚಿಕೊಂಡಿದ್ದರು.

ಅವರ ಹೇಳಿಕೆಗೆ ಪ್ರತಿಯಾಗಿ ಕಾಂಗ್ರೆಸ್ ನಾಯಕರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಅವರು ಪ್ರಧಾನಿಯವರ ಆಲೋಚನೆಗಳು ಶ್ಲಾಘನೀಯವೆಂದು ಭಾವಿಸುವುದಾದರೆ ಕಾಂಗ್ರೆಸ್‌ನಲ್ಲಿ ಏಕೆ ಇದ್ದಾರೆ? ಎಂದು ಪ್ರಶ್ನಿಸಿದ್ದಾರೆ. ಈ ಹೇಳಿಕೆಗೆ ಕಾಂಗ್ರೆಸ್ ಹಿರಿಯ ನಾಯಕ ಸಂದೀಪ್ ದೀಕ್ಷಿತ್ ಪ್ರತಿಕ್ರಿಯಿಸಿದ್ದಾರೆ. ನಿಮ್ಮ ಪ್ರಕಾರ, ಯಾರಾದರೂ ಕಾಂಗ್ರೆಸ್ ನೀತಿಗಳಿಗೆ ವಿರುದ್ಧವಾಗಿ ದೇಶಕ್ಕೆ ಒಳ್ಳೆಯದನ್ನು ಮಾಡುತ್ತಿದ್ದರೆ, ನೀವು ಆ ನೀತಿಗಳನ್ನು ಅನುಸರಿಸಬೇಕು.

ಹಾಗಾದರೆ ನೀವು ಕಾಂಗ್ರೆಸ್‌ನಲ್ಲಿ ಏಕೆ ಇದ್ದೀರಿ? ನೀವು ಸಂಸದರಾಗಿರುವುದರಿಂದ ಮಾತ್ರವೇ? ಬಿಜೆಪಿ ಅಥವಾ ಪ್ರಧಾನಿ ಮೋದಿಯವರ ತಂತ್ರಗಳು ನೀವು ಇರುವ ಪಕ್ಷಕ್ಕಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ನೀವು ನಿಜವಾಗಿಯೂ ಭಾವಿಸಿದರೆ, ನೀವು ವಿವರಣೆ ನೀಡಬೇಕು. ಇಲ್ಲದಿದ್ದರೆ ನೀವು ಕಪಟಿ ಅಂತ ತಿರುಗೇಟು ಕೊಟ್ಟಿದ್ದಾರೆ.

ಮತ್ತೋರ್ವ ಕಾಂಗ್ರೆಸ್ ಮುಖಂಡೆ ಸುಪ್ರಿಯಾ ಶ್ರೀನಾಟೆ ಅವರು, ಮೋದಿ ಅವರ ಉಪನ್ಯಾಸದಲ್ಲಿ ಪ್ರಶಂಸನೀಯ ಅಂತ ಅನಿಸುವಂತಹದ್ದೇನೂ ಇರಲಿಲ್ಲ ಎಂದು ಪರೋಕ್ಷವಾಗಿ ತರೂರ್ ಅನ್ನು ಟೀಕಿಸಿದ್ದಾರೆ. ತರೂರ್ ಅವರ ಈ ಮೆಚ್ಚುಗೆಯ ಬರಹ ಈಗ ಕಾಂಗ್ರೆಸ್ ಒಳಗಿನ ಅಸಮಾಧಾನಕ್ಕೆ ಕಾರಣವಾಗಿದ್ದು, ಪಕ್ಷದ ಒಳ ರಾಜಕೀಯದಲ್ಲಿ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss