ನಕಲಿ ಕಾಲ್‌ಸೆಂಟರ್ ಮೂಲಕ ಸಾರ್ವಜನಿಕರ ವೈಯಕ್ತಿಕ ಮಾಹಿತಿ ಪಡೆಯುತ್ತಿದ್ದ ಜಾಲವನ್ನ ಹುಳಿಮಾವು ಪೊಲೀಸರು ಭೇದಿಸಿದ್ದಾರೆ. ಬಿಹಾರ ಮೂಲದ ಇಬ್ಬರು ಆರೋಪಿಗಳನ್ನು ಶುಕ್ರವಾರ ಬಂಧಿಸಿದ್ದಾರೆ. ಜಿತೇಂದ್ರ ಕುಮಾರ್, ಚಂದನ್ ಕುಮಾರ್ ಬಂಧಿತರು.
ಹುಳಿಮಾವು ವ್ಯಾಪ್ತಿಯ ಕಟ್ಟಡವೊಂದರಲ್ಲಿ ಕಳೆದ ಒಂದು ವರ್ಷದಿಂದ ಆರೋಪಿಗಳು ಕಾಲ್‌ಸೆಂಟರ್ ನಡೆಸುತ್ತಿದ್ದರು. ಎಂಟು ಮಂದಿ ಯುವತಿಯರು ಹಾಗೂ ಯುವಕರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದರು. ನಾಗರಿಕರಿಗೆ ಕರೆ ಮಾಡುತ್ತಿದ್ದ ಸಿಬ್ಬಂದಿ, ಷೇರು ಮಾರುಕಟ್ಟೆ ಹೂಡಿಕೆ ಮಾಡುವಂತೆ ಪ್ರೇರೇಪಿಸುತ್ತಿದ್ದರು. ಜತೆಗೆ, ಅವರ ವೈಯಕ್ತಿಕ ಮಾಹಿತಿ ಪಡೆಯುತ್ತಿದ್ದರು.
ಆರೋಪಿಗಳು ಕಾಲ್‌ಸೆಂಟರ್ ನಡೆಸಲು ಯಾವುದೇ ಪರವಾನಗಿ ಹೊಂದಿಲ್ಲ. ಕಂಪನಿ ಹೆಸರನ್ನು ಬಳಸಿಲ್ಲ. ಅನಧಿಕೃತವಾಗಿ ಕಾಲ್ ಸೆಂಟರ್ ನಡೆಸುತ್ತಿದ್ದ ವಿಚಾರ ಗೊತ್ತಾಗಿದೆ. ಸೈಬರ್ ವಂಚನೆ ಸಲುವಾಗಿ ಕಾಲ್ ಸೆಂಟರ್ ನಡೆಸುತ್ತಿರುವ ಸಂಶಯ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ನಕಲಿ ಕಾಲ್ ಸೆಂಟರ್‌ನಲ್ಲಿ ಏಳು ಕೀಪ್ಯಾಡ್ ಮೊಬೈಲ್, ಐದು ಲ್ಯಾಪ್ಟಾಪ್ ಹಾಗೂ ಐದು ಕಂಪ್ಯೂಟರ್ ಹಾಗೂ ಯಾರಿಗೆಲ್ಲಾ ಕರೆ ಮಾಡಬೇಕು ಅನ್ನೋ ಮಾಹಿತಿಗಳಿರೋ ದಾಖಲೆಗಳು ಪತ್ತೆಯಾಗಿವೆ ಅಂತ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಹೇಳಿದ್ದಾರೆ.
ಆರೋಪಿಗಳ ಕಾಲ್ ಸೆಂಟರ್‌ನಿಂದ ಬಿಹಾರ, ಜಾರ್ಖಂಡ್ ಸೇರಿದಂತೆ ಹಲವು ರಾಜ್ಯಗಳ ಜನರಿಗೆ ಕರೆ ಮಾಡುತ್ತಿದ್ದರು. ಅವರಿಗೆ ಷೇರು ಮಾರುಕಟ್ಟೆ ಹೂಡಿಕೆ ಮಾಡುವಂತೆ ತಿಳಿಸುತ್ತಿದ್ದರು. ಆರೋಪಿಗಳ ಜಾಲದ ಕುರಿತು ವಿಸ್ತ್ರತ ತನಿಖೆ ಮುಂದುವರಿದಿದೆ ಎಂದು ಡಿಸಿಪಿ ಹೇಳಿದ್ದಾರೆ.