ಬಿಹಾರ ಚುನಾವಣಾ ಕಣ ರಂಗೇರುತ್ತಿದೆ. ಎಲೆಕ್ಷನ್ ಪ್ರಚಾರದ ಭರಾಟೆ ಜೋರಾಗಿದ್ದು, ಕಾವು ಹೆಚ್ಚಾಗುತ್ತಿದೆ. ಇಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಹಾರದಲ್ಲಿ ಸಾರ್ವಜನಿಕ ರ್ಯಾಲಿಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಾಯಕರು ಏಕಕಾಲಕ್ಕೆ ರ್ಯಾಲಿ, ಪ್ರಚಾರ ನಡೆಸುತ್ತಿರುವುದು ತೀವ್ರ ಕುತೂಹಲ ಕೆರಳಿಸಿದೆ. ರಾಷ್ಟ್ರೀಯ ಪಕ್ಷಗಳ ಪ್ರಮುಖ ಮುಖಂಡರೇ ಚುನಾವಣಾ ಕಣದಲ್ಲಿ ಇರುವುದರಿಂದ, ಬಿಹಾರದಲ್ಲಿ ಚುನಾವಣಾ ಕಣ ಮತ್ತಷ್ಟು ರಂಗೇರಿದೆ.
ಪ್ರಧಾನಿ ಮೋದಿ ಮುಜಫರ್‌ಪುರ ಮತ್ತು ಸರನ್ ಜಿಲ್ಲೆಗಳಲ್ಲಿ 2 ಸಾರ್ವಜನಿಕ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಚುನಾವಣೆ ಸಂಬಂಧ ಕಳೆದ 2 ದಿನಗಳಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಬಿಹಾರದಲ್ಲೇ ಬೀಡು ಬಿಟ್ಟಿದ್ದಾರೆ.
ರಾಹುಲ್ ಗಾಂಧಿಯವರು ನಳಂದ ಮತ್ತು ಶೇಖ್‌ಪುರ ಜಿಲ್ಲೆಗಳಲ್ಲಿ, ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಮಿತ್ ಶಾ ಅವರು, ಲಖಿಸರೈ, ಮುಂಗೇರ್, ನಳಂದ ಮತ್ತು ಪಾಟ್ನಾದಲ್ಲಿ, ನಾಲ್ಕು ಚುನಾವಣಾ ಸಭೆಗಳನ್ನು ನಿಗದಿಪಡಿಸಿದ್ದಾರೆ. ಇತ್ತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರು, ಬಕ್ಸರ್ ಮತ್ತು ಪಾಟ್ನಾ ಜಿಲ್ಲೆಗಳಲ್ಲಿ ಪ್ರಚಾರ ಸಮಾರಂಭಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

