ಮಾರತಹಳ್ಳಿ ವೈದ್ಯೆ ಡಾ. ಕೃತಿಕಾ ರೆಡ್ಡಿ ಕೊಲೆ ಪ್ರಕರಣ, ರಾಜ್ಯದಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಬಂಧಿತ ಆರೋಪಿ ಪತಿ ಡಾ. ಮಹೇಂದ್ರ ರೆಡ್ಡಿ ಪೊಲೀಸರ ಎದುರು, ಆಘಾತಕಾರಿ ಸತ್ಯಗಳನ್ನು ಬಾಯ್ಬಿಟ್ಟಿದ್ದಾನೆ. ಕೊಲೆಗೆ 3 ಪ್ರಮುಖ ಕಾರಣಗಳನ್ನು ಆರೋಪಿ ಮಹೇಂದ್ರ ಹೇಳಿದ್ದಾನೆ. ನಂಬರ್ 1 ಆಸ್ತಿ, ನಂಬರ್ 2 ಅನೈತಿಕ ಸಂಬಂಧ ನಂಬರ್ 3 ಕೃತಿಕಾಳ ಆರೋಗ್ಯ ಸಮಸ್ಯೆಗಳೇ ಕೊಲೆಗೆ ಪ್ರೇರಣೆಯಾಗಿವೆ ಎನ್ನಲಾಗಿದೆ.
ಪತ್ನಿ ಕೃತಿಕಾ ಕೊಲೆ ಪೂರ್ವನಿಯೋಜಿತ ಅಂತಾ ಮಹೇಂದ್ರ ರೆಡ್ಡಿ ಒಪ್ಪಿಕೊಂಡಿದ್ದಾನೆ. ಆಸ್ತಿ ವಿವಾದವೇ ಕೊಲೆಗೆ ಮುಖ್ಯ ಕಾರಣ. ಕೃತಿಕಾಗೆ ವಿಚ್ಛೇದನ ನೀಡಿದ್ರೆ, ಆಸ್ತಿಯಲ್ಲಿ ನನಗೆ ಪಾಲು ಸಿಗುತ್ತಿರಲಿಲ್ಲ. ಹಾಗಾಗಿ ನಾನು ಡಿವೋರ್ಸ್ ನೀಡಲಿಲ್ಲ. ಜೊತೆಗೆ ಸಮಾಜದಲ್ಲಿ ಮರ್ಯಾದೆ ಕೂಡ ಹೋಗುತ್ತದೆ ಎಂಬ ಭಯವೂ ಇತ್ತು.
ಕೃತಿಕಾಳ ಅನಾರೋಗ್ಯದ ಕಾರಣದಿಂದ ಹಿಂಸೆ ಅನುಭವಿಸುತ್ತಿದ್ದೆ. ಕೃತಿಕಾ ದಿನಪೂರ್ತಿ ಆಸ್ಪತ್ರೆಯಲ್ಲಿ ರೋಗಿಗಳನ್ನು ನೋಡಿಕೊಂಡು ಬಂದ ಮೇಲೆ, ಸಂಜೆ ಮನೆಯಲ್ಲಿ ಇವಳನ್ನೂ ನೋಡಿಕೊಳ್ಳುವುದು ನನಗೆ ಹಿಂಸೆಯಾಗುತ್ತಿತ್ತು. ಕೃತಿಕಾಗೆ ಗ್ಯಾಸ್ಟ್ರಿಕ್ ಸಮಸ್ಯೆಯಿದ್ದ ವಿಷಯವನ್ನು ಆಕೆಯ ಕುಟುಂಬದವರು ಮದುವೆಯ ಸಮಯದಲ್ಲಿ ಮುಚ್ಚಿಟ್ಟಿದ್ದರು ಎಂದು ಮಹೇಂದ್ರ ಆರೋಪಿಸಿದ್ದಾನೆ.
ಇನ್ನು, ತನಗೆ ಅನೈತಿಕ ಸಂಬಂಧ ಇರುವುದಾಗಿ ಆರೋಪಿ ಮಹೇಂದ್ರ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಆದರೆ, ಅನೈತಿಕ ಸಂಬಂಧಕ್ಕೋಸ್ಕರ ಕೊಲೆ ಮಾಡುವ ಉದ್ದೇಶ ಇರಲಿಲ್ಲ. ನಗೆ ಫೆಲೋಶಿಪ್ ರೂಪದಲ್ಲಿ ಪ್ರತಿ ತಿಂಗಳು ಸುಮಾರು 70ರಿಂದ 80 ಸಾವಿರ ರೂ. ಆದಾಯ ಬರುತ್ತಿತ್ತು ಎಂದು ಸ್ಪಷ್ಟಪಡಿಸಿದ್ದಾನೆ.
ಕೊಲೆ ತನಿಖೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಮಹೇಂದ್ರ, ಅನಸ್ತೇಷಿಯಾ ಕೊಟ್ಟು ಸಾಯಿಸಿದರೆ ತನಿಖೆಯಲ್ಲಿ ಗೊತ್ತಾಗುವುದಿಲ್ಲ. ಸಾವಿನ ನಿಖರ ಕಾರಣ ಹೊರಬರುವುದಿಲ್ಲ ಎಂದು ಭಾವಿಸಿದ್ದೆ. ಆದರೆ, ಪೊಲೀಸರು ಇಷ್ಟು ತಾಂತ್ರಿಕವಾಗಿ ಮತ್ತು ಆಳವಾಗಿ ತನಿಖೆ ನಡೆಸುತ್ತಾರೆ ಎಂದು ಗೊತ್ತಿರಲಿಲ್ಲ. ಈ ಮಟ್ಟದ ತನಿಖೆಯಾಗುತ್ತದೆ ಎಂದು ತಿಳಿದಿದ್ರೆ, ನಾನು ಕೊಲೆಯನ್ನೇ ಮಾಡುತ್ತಿರಲಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾನೆ.

