ಮೈಸೂರು : ಕಾಂಗ್ರೆಸ್ ಸರ್ಕಾರದ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ. ಅದು ನಮ್ಮ ಪಕ್ಷವೂ ಅಲ್ಲ, ಅವರ ಹೈಕಮಾಂಡ್ ನಾಯಕರು ಇದ್ದಾರೆ. ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತಾರೋ, ಇಲ್ಲವೋ ನಾನು ಹೇಗೆ ಹೇಳಲಿ. ಆದರೆ ಮಂಡ್ಯ ಜಿಲ್ಲೆಯಲ್ಲಿ ಇಬ್ಬರು ಮುಖ್ಯಮಂತ್ರಿಗಳಾಗಿದ್ದಾರೆ. ಗಣಿಗ ರವಿಕುಮಾರ್ ಮುಂದೆ ಮುಖ್ಯ ಮಂತ್ರಿಯಾದರೂ ಸಂತೋಷ. ಅವರಿಗೆ ಅವಕಾಶ ಸಿಕ್ಕಿದರೆ ಬೇಡ ಅಂತ ಹೇಳಲಾಗುತ್ತದೆಯೇ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಕೈ ಶಾಸಕನ ಪರ ಬ್ಯಾಟ್ ಬೀಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆಯಲ್ಲಿ ಒಂದು 500 ಮೆಗಾವ್ಯಾಟ್ ಜಲ ವಿದ್ಯುತ್ ಯೋಜನೆಯನ್ನು ಆರಂಭಿಸಲಾಗಿತ್ತು. ಅದನ್ನೇ ಮೇಕೆದಾಟು ಅಂತ ಮರುನಾಮಕರಣ ಮಾಡಿದ್ದಾರಷ್ಟೇ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ದೂರಿದ್ದಾರೆ. ನಮ್ಮ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿನ ಯೋಜನೆಗೆ ಇವರು ಬೇರೆ ಹೆಸರನ್ನು ಇಟ್ಟಿದ್ದಾರಷ್ಟೇ. ಮೈತ್ರಿ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದಾಗ ಜಲವಿದ್ಯುತ್ ಯೋಜನೆಯಡಿ 500 ಮೆಗಾವ್ಯಾಟ್ ಉತ್ಪಾದನೆ ಯೋಜನೆಯಾಗಿತ್ತು. ಅದರ ಭಾಗವಾಗಿ ಆ ಬಗ್ಗೆ ವಿಸ್ತ್ರತ ಯೋಜನಾ ವರದಿ ಸಿದ್ದಪಡಿಸಲಾಗಿತ್ತು. ಆದರೆ ಇಲಾಖೆಯ ವತಿಯಿಂದ ಡಿಪಿಆರ್ ಅನುಮೋದನೆಗೂ ಮುನ್ನವೇ ಸರ್ಕಾರ ಬಿದ್ದು ಹೋಯಿತು ಎಂದು ತಿಳಿಸಿದ್ದಾರೆ.
ಬಳಿಕ ಅದೇ ಯೋಜನೆಯನ್ನು ಈಗ ಮೇಕೆದಾಟು ಎನ್ನುವ ಹೆಸರನ್ನು ಇಡಲಾಗಿದೆ. ಆ ಯೋಜನೆ ಪೂರ್ಣವಾದ ಬಳಿಕ ಅದರ ಬಗ್ಗೆ ಚರ್ಚಿಸೋಣ. ನಮ್ಮ ಸಮ್ಮಿಶ್ರ ಸರ್ಕಾರದಲ್ಲಿ ಸೆಸ್ಕ್ ಸ್ಥಾಪಿಸಿ 5 ಜಿಲ್ಲೆಗಳಲ್ಲಿ ವಿದ್ಯುತ್ ಸುಧಾರಣೆ ಮಾಡಲಾಗಿದೆ. ಮಂಡ್ಯ ಜಿಲ್ಲೆ ಯಲ್ಲಿ ಎಸ್‌ಇ, ಪಾಂಡವಪುರ, ನಾಗಮಂಗಲ ತಾಲೂಕುಗಳಲ್ಲಿ ಇಇ ಕಚೇರಿ, ಹಾಸನ ಜಿಲ್ಲೆಗಳಲ್ಲಿ ಎಸ್‌ಇ ಕಚೇರಿ ಆರಂಭಿಸಿ ಹೊಸ ಸ್ಟೇಷನ್ ನಿರ್ಮಿಸಲಾಗಿದೆ. ನಾನು ಸಚಿವನಾಗಿದ್ದಾಗ 5 ಪೈಸೆ ವಿದ್ಯುತ್ ದರ ಹೆಚ್ಚಳ ಮಾಡಲಿಲ್ಲ. ಅಧಿಕಾರದಿಂದ ಇಳಿಯುವಾಗ 500 ಕೋಟಿ ಎಫ್.ಡಿ ಇಡುವಂತೆ ಮಾಡಿದ್ದೆ. ಈಗ ಇಂಧನ ಇಲಾಖೆಯಲ್ಲಿ 55 ಸಾವಿರ ಕೋಟಿ ರೂ.ಸಾಲ ಇದೆ ಎಂದು ರೇವಣ್ಣ ಕಿಡಿಕಾರಿದ್ದಾರೆ.