ಹಾಸನಾಂಬೆ ಉತ್ಸವಕ್ಕೆ ದಿನಗಣನೆ ಶುರುವಾಗಿದೆ. ಅಕ್ಟೋಬರ್ 9ರಿಂದ ಜಾತ್ರೆ ಶುರುವಾಗ್ತಿದ್ದು, ಈ ಬಾರಿಯಿಂದ ವಿಐಪಿ, ವಿವಿಐಪಿ ಸಂಸ್ಕೃತಿಗೆ ಬ್ರೇಕ್ ಹಾಕಲಾಗಿದೆ. ಕಳೆದ ವರ್ಷ ವಿಐಪಿಗಳ ಎಸ್ಕಾರ್ಟ್‌ಗಳ ಸದ್ದು ಹೆಚ್ಚಾಗಿತ್ತು. ಈ ಬಾರಿ ಕೇವಲ 7 ಮಂದಿಗೆ ಮಾತ್ರ ಎಸ್ಕಾರ್ಟ್ ವ್ಯವಸ್ಥೆ ಮಾಡಲಾಗಿದೆಯಂತೆ. ರಾಜ್ಯಪಾಲರು, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಗೃಹ ಸಚಿವರು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಮಾಜಿ ಪ್ರಧಾನಿಗಳಿಗೆ ಮಾತ್ರ ಎಸ್ಕಾರ್ಟ್ ವ್ಯವಸ್ಥೆ ನೀಡಲಾಗಿದೆ.
ಇನ್ನು, ಶಾಸಕರು, ಸಚಿವರು ನ್ಯಾಯಾಧೀಶರು, ಕ್ರೀಡಾಪಟುಗಳು, ಸಿನಿಮಾ ತಾರೆಯರು ಸೇರಿದಂತೆ, ಉಳಿದ ಗಣ್ಯ ವ್ಯಕ್ತಿಗಳು ತಾವು ದೇವಾಲಯಕ್ಕೆ ಭೇಟಿ ನೀಡುವ ಬಗ್ಗೆ, ಇ – ಮೇಲ್ ಅಥವಾ ಫೋನ್ ಕರೆಗಳ ಮೂಲಕ ಮೊದಲೇ ತಿಳಿಸಬೇಕಿದೆ. ಮೊದಲೇ ಮಾಹಿತಿ ನೀಡುವ ಗಣ್ಯವ್ಯಕ್ತಿಗಳನ್ನು, ಜಿಲ್ಲಾಡಳಿತ ನಿಗದಿಪಡಿಸಿರುವ ವಾಹನದಲ್ಲಿ ದೇವಾಲಯಕ್ಕೆ ಕರೆತಂದು, ದೇವರ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಗಣ್ಯ ವ್ಯಕ್ತಿಗಳಿಗೆ ತಮ್ಮ ಕುಟುಂಬದ ನಾಲ್ಕು ಸದಸ್ಯರನ್ನು ಮಾತ್ರ ಜೊತೆಗೆ ಕರೆತರಲು ಅವಕಾಶ ನೀಡಲಾಗಿದೆ. ಆದರೆ, ಯಾವುದೇ ಕಾರಣಕ್ಕೂ ಖಾಸಗಿ ವಾಹನಗಳ ಮೂಲಕ ದೇವಾಲಯಕ್ಕೆ ಆಗಮಿಸಲು ಅವಕಾಶ ಇಲ್ಲ.
ಎಸ್ಕಾರ್ಟ್‌ನಲ್ಲಿ ಆಗಮಿಸುವವರಿಗೆ ಬೆಳಗ್ಗೆ 10.30ರಿಂದ 12.30ರವರೆಗೆ ದರ್ಶನಕ್ಕೆ ಅವಕಾಶ ಇರಲಿದೆ. ಪಾಸ್ ಪಡೆದವರಿಗೆ ಬೆಳಗ್ಗೆ 7.30ರಿಂದ 10ರ ನಡುವೆ ಪ್ರವೇಶ ನೀಡಲಾಗುವುದು. ಒಂದು ದಿನಕ್ಕೆ 1,000 ಪಾಸ್‌ಗಳನ್ನು ಮಾತ್ರ ವಿತರಿಸಲಾಗುತ್ತಿದೆ. ಈ ವರ್ಷ ಸುಮಾರು 25 ಲಕ್ಷಕ್ಕೂ ಹೆಚ್ಚು ಮಂದಿ, ಉತ್ಸವಕ್ಕೆ ಆಗಮಿಸುವ ನಿರೀಕ್ಷೆ ಇದೆ. ಈಗಾಗಲೇ ಜಿಲ್ಲಾಡಳಿತ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿದೆ.

