ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು. ಇದೇ ನಾದದೊಂದಿಗೆ ಇಂದು ಸಂಪೂರ್ಣ ಕರ್ನಾಟಕವು 70ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ – ಸಡಗರದಿಂದ ಆಚರಿಸಲಾಗುತ್ತಿದೆ.
ರಾಜ್ಯಾದ್ಯಂತ ಕನ್ನಡ ಧ್ವಜ ಹಾರಾಟ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕನ್ನಡದ ಗೌರವ ಕಾಪಾಡುವ ಉತ್ಸಾಹದ ನಡುವೆ ದೇಶದ ಪ್ರಮುಖ ನಾಯಕರು ಕನ್ನಡಿಗರಿಗೆ ಕನ್ನಡದಲ್ಲೇ ಶುಭ ಹಾರೈಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ ಮೂಲಕ ಕನ್ನಡದಲ್ಲಿಯೇ ಸಂದೇಶ ನೀಡಿ, ಇಂದು ಕನ್ನಡ ರಾಜ್ಯೋತ್ಸವದಂದು, ಕರ್ನಾಟಕದ ಜನರ ಶ್ರೇಷ್ಠತೆ, ಶ್ರಮಶೀಲತೆ ಹಾಗೂ ಸಾಹಿತ್ಯ, ಕಲೆ, ಸಂಗೀತ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಶ್ರೀಮಂತ ಸಂಸ್ಕೃತಿಯನ್ನು ನಾವು ಆಚರಿಸುತ್ತೇವೆ ಎಂದು ತಿಳಿಸಿದ್ದಾರೆ. ಕರ್ನಾಟಕದ ಜನರು ಸದಾ ಸಂತೋಷ ಮತ್ತು ಆರೋಗ್ಯದಿಂದ ಇರಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
ಅದೇ ರೀತಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಕರ್ನಾಟಕದ ಸಹೋದರ ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿ, ಕರ್ನಾಟಕವು ಕಲೆ, ನಾವೀನ್ಯತೆ ಮತ್ತು ಕಲಿಕೆಯ ಶ್ರೀಮಂತ ಪರಂಪರೆಯನ್ನು ಹೊಂದಿದ್ದು, ರಾಷ್ಟ್ರದ ಪ್ರಗತಿಗೆ ಅಮೂಲ್ಯ ಕೊಡುಗೆ ನೀಡಿದೆ ಎಂದು ಪ್ರಶಂಸಿದ್ದಾರೆ. ರಾಜ್ಯಾದ್ಯಂತ ಕನ್ನಡ ಬಣ್ಣದ ಹಬ್ಬವಾಗಿ ಮಾರ್ಪಟ್ಟಿರುವ ಈ ರಾಜ್ಯೋತ್ಸವ ದಿನ, ಕನ್ನಡದ ಗೌರವ ಕಾಪಾಡುವ ಪ್ರತಿಜ್ಞೆಯ ದಿನವಾಗಿಯೂ ಪರಿಣಮಿಸಿದೆ.
ವರದಿ: ರಂಜಿತ ರೇವಣ್ಣ ನಾಟನಹಳ್ಳಿ

