ಬೆಂಗಳೂರು : ಟ್ರಾಫಿಕ್ ಪೊಲೀಸರ ಎಡವಟ್ಟಿನಿಂದಾಗಿ ಮಂಡ್ಯದಲ್ಲಿ ಮೂರು ವರ್ಷದ ರಿತೀಕ್ಷಾ ಎಂಬ ಮಗು ಮೃತಪಟ್ಟ ಘಟನೆ ಕರ್ನಾಟಕದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸರ ಅಮಾನವೀಯ ನಡೆಯನ್ನು ರಾಜ್ಯದ ಜನರು ಖಂಡಿಸಿದ್ದಾರೆ.
ಇನ್ನೂ ಇದೀಗ ಘಟನೆಯ ಕುರಿತಂತೆ ನಗರದಲ್ಲಿಂದು ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ. ಜಿ ಪರಮೇಶ್ವರ್, ಮಂಡ್ಯದಲ್ಲಿ ಸಂಭವಿಸಿರುವ ಘಟನೆ ಎಲ್ಲರೂ ತಲೆತಗ್ಗಿಸುವಂತಹದ್ದು. ಈ ಸಂಬಂಧ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಮತ್ತೆ ಇಂತಹ ಘಟನೆ ಆಗದಂತೆ ಕ್ರಮ ಕೈಗೊಳ್ಳುತ್ತೇವೆ. ಇದೇ ವಿಚಾರವನು ಗಂಭೀರವಾಗಿ ಪರಿಗಣಿಸಿ ಸಭೆ ಕರೆದಿದ್ದೇನೆ, ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಮಂಡ್ಯದ ಘಟನೆಯಲ್ಲಿ ಪೊಲೀಸರು ಮಾನವೀಯತೆ ತೋರಿಸಲಿಲ್ಲ, ಸ್ವಂತಿಕೆಯನ್ನೂ ಪ್ರದರ್ಶಿಸಲಿಲ್ಲ., ಮೇಲಾಗಿ ಅವರು ಸರಿಯಾಗಿ ನಡೆದುಕೊಳ್ಳಲಿಲ್ಲ. ಪೊಲೀಸರು ಅವೈಜ್ಞಾನಿಕವಾಗಿ ಸವಾರರನ್ನು ತಡೆಯುವುದು ಬೇಡ. ಪೊಲೀಸರು ಎಲ್ಲೋ ಮೂಲೆಯಲ್ಲಿ ನಿಂತು ದಿಢೀರ್ ಆಗಿ ಎದುರು ಬಂದು ತಡೆಯುತ್ತಾರೆ. ಪೊಲೀಸರು ಹೀಗೆ ಮಾಡಬಾರದು. ತಪಾಸಣೆ ನಡೆಸಲು ಅದರದ್ದೇ ಆದ ಒಂದು ಪದ್ಧತಿ ಇದೆ. ಅದನ್ನು ಪೊಲೀಸರು ಅನುಸರಿಸಬೇಕು ಎಂದು ಪರಮೇಶ್ವರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸ್ಪೀಡಾಗಿ ಬರುವ ಬೈಕ್ ಸವಾರರನ್ನು ಪೊಲೀಸರು ದಿಢೀರಾಗಿ ಎದುರು ಬಂದು ತಡೆಯುತ್ತಾರೆ. ಇದರಿಂದ ಸವಾರರು ವಿಚಲಿತರಾಗುತ್ತಾರೆ. ಈ ವಿಚಾರವಾಗಿ ಸಭೆಯಲ್ಲಿ ಚರ್ಚೆ ಮಾಡಿ ಸರಿಯಾದ ಸೂಚನೆ ಕೊಡುತ್ತೇನೆ. ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರೂ ಪೊಲೀಸರು ಬಿಡಲಿಲ್ಲ. ಇಂತಹ ಸಂದರ್ಭಗಳಲ್ಲಿ ಪೊಲೀಸರು ಸ್ವಂತ ನಿರ್ಧಾರ ತೆಗೆದುಕೊಳ್ಳಬೇಕು. ಸಾರ್ವಜನಿಕರಿಗೆ ತೊಂದರೆಯಾಗುವಂತೆ ಯಾರೊಬ್ಬ ಪೊಲೀಸರು ತಮ್ಮ ವರ್ತನೆಯನ್ನು ಮಾಡಬಾರದು ಎಂದು ಅವರು ಖಡಕ್ ಸೂಚನೆ ನೀಡಿದ್ದಾರೆ.
ಅಲ್ಲದೆ ನಾವು ರಾಜ್ಯದಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತಜ ಯಾವುದೇ ನಿರ್ಧಾರವನ್ನು ಮಾಡುವುದಿಲ್ಲ. ಟೋಯಿಂಗ್ ಜಾರಿ ಕುರಿತು ಚರ್ಚಿಸಲಾಗಿದೆ. ನನ್ನ ಗಮನಕ್ಕೆ ತಂದಿದ್ದರು. ಟೋಯಿಂಗ್ನಿಂದ ಸಾರ್ವಜನಿಕರಿಗೆ ಉಪಯೋಗ ಆಗುವುದಾದರೆ ಮತ್ತೆ ಜಾರಿಗೆ ತರುತ್ತೇವೆ. ಆದರೆ, ಅದು ಸಾರ್ವಜನಿಕರಿಗೆ ತೊಂದರೆ ಆಗುವುದಾದರೆ ಜಾರಿಗೊಳಿಸುವುದಿಲ್ಲ. ಏನೇ ನಿರ್ಧಾರ ಮಾಡಿದರೂ ಸಾರ್ವಜನಿಕರಿಗೆ ಉಪಯೋಗ ಆಗಬೇಕು. ಸಾಧಕ ಬಾಧಕ ಚರ್ಚೆ ಮಾಡಿ ತೀರ್ಮಾನ ತಗೊಳ್ಳುತ್ತೇವೆ ಎಂದು ರಸ್ತೆ ಬದಿ ವಾಹನಗಳ ಟೋಯಿಂಗ್ ಮಾಡುವ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ.
ಏನಿದು ಮಂಡ್ಯದ ಘಟನೆ..?
ಕಳೆದ ಸೋಮವಾರ ಮಂಡ್ಯದ ಮದ್ದೂರು ತಾಲ್ಲೂಕಿನ ಗೊರವನಹಳ್ಳಿ ಗ್ರಾಮದ ಅಶೋಕ್ ಮತ್ತು ವಾಣಿ ದಂಪತಿ, ತಮ್ಮ ಮಗಳು 3 ವರ್ಷದ ರಿತೀಕ್ಷಾಗೆ ನಾಯಿ ಕಚ್ಚಿದ್ದ ಹಿನ್ನೆಲೆಯಲ್ಲಿ ತುರ್ತು ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ಬೈಕ್‌ನಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಮಂಡ್ಯ ನಗರದ ನಂದ ಸರ್ಕಲ್ ಬಳಿ ಟ್ರಾಫಿಕ್ ಪೊಲೀಸರು ಹೆಲ್ಮೆಟ್ ಧರಿಸಿಲ್ಲ ಎಂದು ತಪಾಸಣೆಗಾಗಿ ಬೈಕ್ ಅನ್ನು ಅಡ್ಡಗಟ್ಟಿದ್ದಾರೆ.
ಈ ವೇಳೆ ಪೋಷಕರು ಮಗುವಿಗೆ ನಾಯಿ ಕಚ್ಚಿದ್ದು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೇವೆ ಎಂದು ಹೇಳಿದ್ದರು. ಆದರೆ ಬೈಕ್ ಸವಾರ ಕೊಂಚ ಮುಂದಕ್ಕೆ ಹೋಗುತ್ತಲೇ ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಮತ್ತೊಂದು ವಾಹನ ಅವರಿಗೆ ಟಚ್ ಆಗಿದೆ. ಈ ವೇಳೆ ಬೈಕ್ ಸವಾರ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದು, ಮಗು ಕೂಡ ಕೆಳಗೆ ರಸ್ತೆ ಮೇಲೆ ಬಿದ್ದಿದೆ. ಇದೇ ಸಂದರ್ಭದಲ್ಲೇ ಹಿಂಬದಿಯಿಂದ ಬಂದ ಟೆಂಪೋ ಮಗು ಮೇಲೆ ಹರಿದಿದ್ದು, ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಇದರಿಂದ ಸಿಡಿದೆದ್ದ ಕುಟುಂಬಸ್ಥರು ಟ್ರಾಫಿಕ್ ಪೊಲೀಸರ ವಿರುದ್ಧ ಆಕ್ರೋಶಗೊಂಡು ಹೆದ್ದಾರಿಯಲ್ಲಿ ಮಗುವಿನ ಶವವಿಟ್ಟು ಪ್ರತಿಭಟನೆ ನಡೆಸಿದ್ದರು.
ಇನ್ನು ಈ ಪ್ರಕರಣ ತೀವ್ರ ಸ್ವರೂಪ ಪಡೆಯುತ್ತಿದ್ದಂತೆಯೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಎಎಸ್ಐಗಳನ್ನು ಅಮಾನತು ಮಾಡಲಾಗಿದೆ. ಘಟನೆಯ ಬಳಿಕ ಎಚ್ಚೆತ್ತುಕೊಂಡ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಹೆಲ್ಮೆಟ್ ತಪಾಸಣೆ ಮಾಡುತ್ತಿದ್ದ ಮೂವರು ಎಎಸ್ಐಗಳನ್ನು ಅಮಾನತು ಮಾಡಿದ್ದಾರೆ. ಎಎಸ್‌ಐಗಳಾದ ಜಯರಾಮ್, ನಾಗರಾಜ್, ಗುರುದೇವ್ ಅಮಾನತುಗೊಂಡವರಾಗಿದ್ದಾರೆ.