ಫಿಲಿಪೈನ್ಸ್‌ನಲ್ಲಿ ಭೀಕರ ದುರಂತ ಸಂಭವಿಸಿದೆ. ಫಿಲಿಪೈನ್ಸ್‌ನ ಸೆಬು ದ್ವೀಪದಲ್ಲಿ ಮಂಗಳವಾರ ಸಂಭವಿಸಿದ 6.9 ತೀವ್ರತೆಯ ಭೀಕರ ಭೂಕಂಪದಲ್ಲಿ ಹಲವಾರು ಜನ ಮೃತಪಟ್ಟಿದ್ದಾರೆ. ಸದ್ಯ ಮೃತ ಪಟ್ಟವರ ಸಂಖ್ಯೆ 31ಕ್ಕೆ ಏರಿಕೆ ಕಂಡಿದೆ. 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸುಮಾರು 379ಕ್ಕೂ ಅಧಿಕ ಮರುಕಂಪನಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ಕಠಿಣ ಪರಿಸ್ಥಿತಿಯಲ್ಲಿ ನಡೆಯುತ್ತಿದೆ.
ಅಮೆರಿಕದ ಭೂಗರ್ಭಶಾಸ್ತ್ರೀಯ ಸಮೀಕ್ಷಾ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ, ಭೂಕಂಪದ ಕೇಂದ್ರಬಿಂದು ಸೆಬು ದ್ವೀಪದ ಬೊಗೊ ನಗರದ ಸಮೀಪ, ಸ್ಥಳೀಯ ಕಾಲಮಾನ ಸಂಜೆ 9:59ಕ್ಕೆ ದಾಖಲಾಗಿದೆ. ರಿಕ್ಟರ್ ಮಾಪಕದಲ್ಲಿ 6.9 ತೀವ್ರತೆ ದಾಖಲಾಗಿದೆ. ಸುಮಾರು 90,000 ಜನಸಂಖ್ಯೆ ಹೊಂದಿರುವ ಬೊಗೊ ನಗರದ ಸಮೀಪ ಭೂಕಂಪದ ಕೇಂದ್ರಬಿಂದು ಕಂಡು ಬಂದಿದೆ. ಭೂಕಂಪದ ತೀವ್ರತೆಗೆ ಸೆಬು, ಬಂಟಾಯನ್ ಸೇರಿದಂತೆ ಹಲವೆಡೆ ಕಟ್ಟಡಗಳು ಕುಸಿದು ಬಿದ್ದಿವೆ. ಕುಸಿದುಬಿದ್ದ ಕಟ್ಟಡಗಳ ಅವಶೇಷಗಳಡಿ ಸಿಲುಕಿರುವವರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಸೆಬು ಪ್ರಾಂತದ ಗವರ್ನರ್ ಪಮೇಲಾ ಬರಿಕ್ವಾತ್ರೊ ಅವರು ನೀಡಿರುವ ಮಾಹಿತಿಯಂತೆ, ಬೊಗೊ ನಗರದಲ್ಲಿಯೇ 25 ಸಾವುಗಳು ಸಂಭವಿಸಿವೆ. ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಗಳಲ್ಲಿ ಹಾಗೂ ತಾತ್ಕಾಲಿಕ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳ ಸಂಖ್ಯೆ ಹೆಚ್ಚಾಗಿದ್ದು, ಸ್ಥಳೀಯ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿ ಆಸ್ಪತ್ರೆಯ ಹೊರಗಡೆಯೇ ಚಿಕಿತ್ಸೆ ನೀಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಂಡಳಿಯ ಪ್ರಕಾರ, ಭೂಕಂಪದಲ್ಲಿ 147 ಜನರು ಗಾಯಗೊಂಡಿದ್ದು, 22 ಕಟ್ಟಡಗಳಿಗೆ ಹಾನಿಯಾಗಿದೆ.
ಬಂಟಾಯನ್ ದ್ವೀಪದ ಐತಿಹಾಸಿಕ ಕ್ಯಾಥೋಲಿಕ್ ಚರ್ಚ್‌ನ ಗಂಟೆ ಗೋಪುರ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಅದರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸ್ಥಳೀಯ ಆಡಳಿತವು ವೈದ್ಯಕೀಯ ಸ್ವಯಂಸೇವಕರಿಗೆ ಹಾಗೂ ತುರ್ತು ಸಿಬ್ಬಂದಿಗೆ ಸಹಾಯ ಮಾಡಬೇಕೆಂದು ಮನವಿ ಮಾಡಿದ್ದಾರೆ. ಹಾನಿಗೊಂಡ ವಿದ್ಯುತ್ ಮಾರ್ಗಗಳ ದುರಸ್ತಿ ಕಾರ್ಯ ಕೂಡ ವೇಗವಾಗಿ ನಡೆಯುತ್ತಿದೆ. ಹಲವೆಡೆ ವಿದ್ಯುತ್ ಸರಬರಾಜು ಪುನರ್ ಸ್ಥಾಪನೆಯಾಗಿದೆ.
ಫಿಲಿಪೈನ್ಸ್ ದೇಶವು ಪೆಸಿಫಿಕ್ ‘ರಿಂಗ್ ಆಫ್ ಫೈರ್’ ವಲಯದಲ್ಲಿದೆ. ಈ ಪ್ರದೇಶದಲ್ಲಿ ಭೂಕಂಪಗಳು ಮತ್ತು ಜ್ವಾಲಾಮುಖಿ ಚಟುವಟಿಕೆಗಳು ಸಾಮಾನ್ಯವಾಗಿವೆ. ಮೇಲೆಂದ ಮೇಲೆ ಇಲ್ಲಿ ಭೂಕಂಪಗಳು ಆಗ್ತಾ ಇರತ್ತೆ. ಆದಾಗ್ಯೂ, ಇಷ್ಟು ತೀವ್ರತೆಯ ಭೂಕಂಪಗಳು ಅಪರೂಪವಾಗಿದ್ದು, ಅಪಾರ ಹಾನಿಯನ್ನುಂಟು ಮಾಡಿದೆ. ಈ ಭೂಕಂಪದಿಂದ ಯಾವುದೇ ಸುನಾಮಿ ಎಚ್ಚರಿಕೆಯನ್ನು ನೀಡಿಲ್ಲ ಎಂದು ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ತಿಳಿಸಿದೆ.
ವರದಿ : ಲಾವಣ್ಯ ಅನಿಗೋಳ