ಪ್ರತಿಷ್ಠಿತ ಹುಕ್ಕೇರಿ ಸಹಕಾರ ಸಂಘದ ಚುನಾವಣಾ ಕಣ ರಣರಂಗವಾಗಿದೆ. ಬಿಜೆಪಿಯ ಮಾಜಿ ಸಂಸದ ರಮೇಶ್ ಕತ್ತಿ ಬಣ ಚುನಾವಣೆಯಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಸಚಿವ ಸತೀಶ್ ಜಾರಕಿಹೊಳಿ ಬಣ ಸೋಲಿಸಿ, ಎಲ್ಲಾ 15 ಸ್ಥಾನಗಳನ್ನು ಗೆದ್ದುಕೊಳ್ಳುವಲ್ಲಿ ಸಕ್ಸಸ್ ಆಗಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಬಾಪೂಜಿ ಕಾಲೇಜಿನಲ್ಲಿ ಮತ ಎಣಿಕೆ ನಡೆಸಲಾಯ್ತು.
ಗೆಲುವಿನ ಸಂಭ್ರಮಾಚರಣೆಯಲ್ಲಿದ್ದ ರಮೇಶ್ ಕತ್ತಿ ಬೆಂಬಲಿಗರು, ಸತೀಶ್ ಜಾರಕಿಹೊಳಿ ಬೆಂಬಲಿಗರಿದ್ದ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿ ಹುಚ್ಚಾಟ ಮೆರೆದಿದ್ದಾರೆ.
ಚುನಾವಣಾ ಮತದಾನದ ವೇಳೆ ಮತಗಟ್ಟೆ ಬಳಿ ಹೋಗಿದ್ದ ರಮೇಶ್ ಕತ್ತಿ ಜೊತೆ, ಸತೀಶ್ ಜಾರಕಿಹೊಳಿ ಬೆಂಬಲಿಗರು ಭಾರೀ ಗಲಾಟೆ ಮಾಡಿಕೊಂಡಿದ್ರು. ಪೊಲೀಸರ ಎದುರೇ ಮಾತಿಗೆ ಮಾತು ಬೆಳೆಸಿದ್ದು, ಹುಕ್ಕೇರಿ ತಾಲೂಕನ್ನು ನಿಮ್ಮ ಹೆಸರಿಗೆ ಬರೆದು ಕೊಟ್ಟಿದ್ದಾರಾ ಎಂದು ರಮೇಶ್ ಕತ್ತಿಯನ್ನು ಕಠಿಣವಾಗೇ ಪ್ರಶ್ನಿಸಿದ್ರು. ಆ ವೇಳೆ ಹೆಚ್ಚು ಮಾತನಾಡದ ರಮೇಶ್ ಕತ್ತಿ, ಸೈಲೆಂಟ್ ಆಗಿ ವಾಪಸ್ ಆಗಿದ್ರು.
ಈಗ ರಮೇಶ್ ಕತ್ತಿ ಬಣ ಗೆಲುವಿನ ಪತಾಕೆ ಹಾರಿಸುತ್ತಿದ್ದಂತೆ, ಅಭಿಮಾನಿಗಳೆಲ್ಲಾ ಭಾರೀ ಹುಮ್ಮಸ್ಸಿನಲ್ಲಿದ್ರು. ಈ ವೇಳೆ ಸತೀಶ್ ಜಾರಕಿಹೊಳಿ ಬೆಂಬಲಿಗರ ಕಾರಿಗೆ ಕೈಯಿಂದ ಗುದ್ದಿದ್ದಾರೆ. ಕೂಡಲೇ ಕಾರ್ಯಪ್ರೌವೃತ್ತರಾದ ಪೊಲೀಸರು ಎಲ್ಲರನ್ನೂ ಚದುರಿಸಿದ್ರು.
ಉಮೇಶ್ ಕತ್ತಿ ಬದುಕಿದ್ದಾಗ ಒಪ್ಪಂದಕ್ಕೆ ಮುಂದಾಗುತ್ತಿದ್ದ ಜಾರಕಿಹೊಳಿ ಬ್ರದರ್ಸ್, ಈಗ ಕತ್ತಿ ಕುಟುಂಬದ ವಿರುದ್ಧ ಅಖಾಡಕ್ಕೆ ಇಳಿದಿದ್ರು. ಆದ್ರೀಗ ಸತೀಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ರಮೇಶ್ ಜಾರಕಿಹೊಳಿಗೆ ಭಾರೀ ಮುಖಭಂಗವಾಗಿದೆ.

