ಬಿಹಾರದಲ್ಲಿ 121 ಕ್ಷೇತ್ರಗಳಿಗೆ ಮತದಾನ

ಬಿಹಾರ ವಿಧಾನಸಭಾ ಚುನಾವಣೆಗೆ ಮೊದಲ ಹಂತದ ಮತದಾನ ಆರಂಭವಾಗಿದೆ. ಇಂದು 18 ಜಿಲ್ಲೆಗಳ 121 ವಿಧಾನಸಭಾ ಕ್ಷೇತ್ರಗಳಲ್ಲಿ ಜನರು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. 3.75 ಕೋಟಿ ಮತದಾರರು ಮತದಾರರು 1,314 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸುತ್ತಿದ್ದಾರೆ.

ಈ ಚುನಾವಣೆಯೂ ಬಿಹಾರ ರಾಜ್ಯ ರಾಜಕೀಯದ ದಿಕ್ಕನ್ನು ನಿರ್ಧರಿಸುವುದಲ್ಲದೇ, ಎನ್‌ಡಿಎ ಮತ್ತು ಮಹಾ ಮೈತ್ರಿಕೂಟ ಎರಡಕ್ಕೂ ಅಗ್ನಿಪರೀಕ್ಷೆಯಾಗಿದೆ. ಇಂದು ಸಂಜೆಯವರೆಗೆ ಮತದಾನ ನಡೆಯುತ್ತಿದ್ದು, ಪ್ರತಿ ಮತಗಟ್ಟೆಯಲ್ಲೂ ಸಶಸ್ತ್ರ ಪಡೆಗಳನ್ನು ನಿಯೋಜಿಸಲಾಗಿದೆ.

ಮಹಾಘಟಬಂಧನ್‌ ಮೈತ್ರಿಕೂಟದ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್‌ ಹಾಗೂ ಹಾಲಿ ಡಿಸಿಎಂ ಸಾಮ್ರಾಟ್‌ ಚೌಧರಿ ಭವಿಷ್ಯವನ್ನೂ ಮತದಾರರು ಬರೆಯಲಿದ್ದಾರೆ. ತೇಜಸ್ವಿ ಯಾದವ್‌ ರಾಘೋಪುರ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಹ್ಯಾಟ್ರಿಕ್‌ ಗೆಲುವಿನ ಗುರಿ ಇಟ್ಟಿದ್ದಾರೆ. ಬಿಹಾರ ಸರ್ಕಾರದ ಅರ್ಧಕ್ಕೂ ಹೆಚ್ಚು ಸಚಿವರು, ಮೊದಲ ಹಂತದ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಸ್ಪರ್ಧೆಯಲ್ಲಿದ್ದಾರೆ.

25 ಸ್ಥಾನಗಳಲ್ಲಿ ಬಿಜೆಪಿ ಮತ್ತು ಆರ್‌ಜೆಡಿ ನಡುವೆ ನೇರ ಸ್ಪರ್ಧೆ ಇದೆ. 12 ಸ್ಥಾನಗಳಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಸ್ಪರ್ಧಿಸಿದರೆ, 34 ಸ್ಥಾನಗಳಲ್ಲಿ ಜೆಡಿಯು ಮತ್ತು ಆರ್‌ಜೆಡಿ ಸ್ಪರ್ಧಿಸುತ್ತಿವೆ. 11 ಸ್ಥಾನಗಳಲ್ಲಿ ಜೆಡಿಯು ವಿರುದ್ಧ ಕಾಂಗ್ರೆಸ್ ಸ್ಪರ್ಧಿಸುತ್ತಿದೆ. ಮತ್ತು 14 ಸ್ಥಾನಗಳಲ್ಲಿ LJPR ಮತ್ತು RJD ಸ್ಪರ್ಧಿಸುತ್ತಿದ್ದು, ಈ ಪೈಕಿ 12 ಸ್ಥಾನಗಳಲ್ಲಿ ನೇರ ಸ್ಪರ್ಧೆ ಇದೆ.

ಚುನಾವಣಾ ಕೆಲಸಕ್ಕಾಗಿ ಸುಮಾರು ನಾಲ್ಕೂವರೆ ಲಕ್ಷ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದರಲ್ಲಿ ಕೇಂದ್ರ ಪಡೆಗಳ 1500 ಸಿಬ್ಬಂದಿ, 60 ಸಾವಿರಕ್ಕೂ ಹೆಚ್ಚು ಬಿಹಾರ ಪೊಲೀಸ್ ಸಿಬ್ಬಂದಿ-ಅಧಿಕಾರಿಗಳು, 30 ಸಾವಿರ ಬಿಹಾರ ವಿಶೇಷ ಸಶಸ್ತ್ರ ಪೊಲೀಸರು, 22 ಸಾವಿರ ಗೃಹರಕ್ಷಕರು, 20 ಸಾವಿರ ತರಬೇತಿ ಕಾನ್‌ಸ್ಟೇಬಲ್‌ಗಳು ಮತ್ತು ಸುಮಾರು 1.5 ಲಕ್ಷ ಕಾವಲುಗಾರರನ್ನ ಚುನಾವಣಾ ಕೆಲಸಕ್ಕಾಗಿ ನಿಯೋಜಿಸಲಾಗಿದೆ.

ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ಬಿಹಾರ ಪೊಲೀಸರು ಕ್ಯೂಆರ್‌ಟಿ ತಂಡವನ್ನ ರಚಿಸಿದ್ದಾರೆ. ಈ ತಂಡವು ಚುನಾವಣೆ ಸಮಯದಲ್ಲಿನ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಿರುತ್ತಾರೆ. ಈ ತಂಡದಲ್ಲಿ ಭಯೋತ್ಪಾದನಾ ನಿಗ್ರಹ ದಳ ಮತ್ತು ವಿಶೇಷ ಕಾರ್ಯಪಡೆಯ ಕಮಾಂಡೋಗಳು ಇರಲಿದ್ದಾರೆ.

ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದ ಶಸ್ತ್ರಾಸ್ತ್ರ ಕಾಯ್ದೆಯಡಿ 1 ಸಾವಿರ ಜನರನ್ನು, ಸುಮಾರು 800 ಅಕ್ರಮ ಶಸ್ತ್ರಾಸ್ತ್ರಗಳೊಂದಿಗೆ ಬಂಧಿಸಲಾಗಿದೆ.

About The Author