ಉಷಾ ಗೋವಿಂದರಾಜು ನಿರ್ಮಾಣದ “ಎಲ್ರ ಕಾಲೆಳಿಯತ್ತೆ ಕಾಲ” ಚಿತ್ರದ ಪತ್ರಿಕಾಗೋಷ್ಠಿ ಶುಕ್ರವಾರ ಬನಶಂಕರಿಯಲ್ಲಿರುವ ಸಂಕ್ರಾಂತಿ ಕಲ್ಯಾಣ ಮಂಟಪದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಮತ್ತು ನಟ ಸುಜಯ್ ಶಾಸ್ತ್ರಿ, ನಾಯಕ ಚಂದನ್ ಶೆಟಿ, ನಾಯಕಿ ಅರ್ಚನಾ ಕೊಟ್ಟಿಗೆ, ಕಥೆ-ಚಿತ್ರಕಥೆ ಮತ್ತು ಸಂಭಾಷಣೆ ಬರೆದಿರುವ ರಾಜಗುರು ಹೊಸಕೋಟೆ, ಸಂಗೀತ ನಿರ್ದೇಶಕರಾದ ಪ್ರವೀಣ್-ಪ್ರದೀಪ್, ಬಿಗ್ ಬಾಸ್ ವಿಜೇತ ಮಂಜು ಪಾವಗಡ ಮುಂತಾದವರು ಹಾಜರಿದ್ದರು.
ನಮ್ಮ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿದೆ. ಸದ್ಯದಲ್ಲೇ ಮೊದಲ ಪ್ರತಿ ಬರಲಿದೆ. ಇಂದಿನಿಂದ ಪ್ರಚಾರ ಕಾರ್ಯ ಶುರುವಾಗಲಿದೆ. ಇಂದು ನಮ್ಮ ಚಿತ್ರದ ಮೊದಲ ಹಾಡು (ಗೋಲ್ಡ್ ಫ್ಯಾಕ್ಟರಿ)
ಬಿಡುಗಡೆಯಾಗಿದೆ. ಅದೊಂದು ಮದುವೆಯ ಆರತಕ್ಷತೆಯ ಹಾಡು. ಇದೇ ಕಲ್ಯಾಣ ಮಂಟಪದಲ್ಲಿ ಆ ಹಾಡಿನ ಚಿತ್ರೀಕರಣ ನಡೆದಿದ್ದರಿಂದ, ಅದರ ನೆನಪಿನಲ್ಲಿ ಇಲ್ಲೇ ಪತ್ರಿಕಾಗೋಷ್ಠಿ ಮಾಡುತ್ತಿದ್ದೇವೆ. ರಾಜಗುರು ಹೊಸಕೋಟೆ ಬರೆದಿರುವ ಈ ಹಾಡನ್ನು ಗುರುರಾಜ ಹೊಸಕೋಟೆ, ಪ್ರವೀಣ್ – ಪ್ರದೀಪ್ ಹಾಡಿದ್ದಾರೆ.
ಇಂದಿನಿಂದ ಐದು ಅಥವಾ 10 ದಿನಗಳಿಗೊಮ್ಮೆ ಚಿತ್ರದ ಹಾಡು ಅಥವಾ ಕಂಟೆಂಟ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರವನ್ನು ಮುಂದುವರೆಸುತ್ತೇವೆ. ಇದೊಂದು 80ರ ದಶಕದ ಕಥೆ. ಒಂದು ಘಟನೆ ಒಬ್ಬ ವ್ಯಕ್ತಿಯ ಜೀವನದಲ್ಲಿ ಯಾವ ತರಹದ ಪಾತ್ರ ವಹಿಸುತ್ತದೆ ಎಂದು ಹೇಳುವ ಪ್ರಯತ್ನ ಮಾಡಿದ್ದೇವೆ. ಕಾಲ ಯಾರನ್ನೂ ಬಿಡುವುದಿಲ್ಲ, ಎಲ್ಲರ ಕಾಲನ್ನೂ ಎಳೆಯುತ್ತದೆ ಎಂದು ಈ ಚಿತ್ರದ ಮೂಲಕ ತೋರಿಸುವುದಕ್ಕೆ ಹೊರಟಿದ್ದೇವೆ. ಇಲ್ಲಿ ಚಂದನ್ ಮತ್ತು ಅರ್ಚನಾ ಅವರ ಕೆಮಿಸ್ಟ್ರಿ ಚೆನ್ನಾಗಿ ವರ್ಕೌಟ್ ಆಗಿದೆ. ಅವರು ನಟಿಸಬಾರದು. ಸಹಜವಾಗಿ ವರ್ತಿಸಬೇಕು ಎಂಬುದು ನನ್ನ ಆಸೆ ಆಗಿತ್ತು.
ಹಾಗಾಗಿ, ವರ್ಕ್ ಶಾಪ್ ಮಾಡಿದೆ. ಇಬ್ಬರೂ ಬಹಳ ಸಹಜವಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಚಿತ್ರ ವಿಭಿನ್ನವಾಗಿ ಮತ್ತು ನಾವು ಅಂದುಕೊಂಡಿದ್ದಕ್ಕಿಂತ ಚೆನ್ನಾಗಿ ಮೂಡಿಬಂದಿದೆ. ನಿರ್ಮಾಪಕರು ಮತ್ತು ಚಿತ್ರತಂಡದವರ ಸಹಕಾರವಿಲ್ಲದಿದ್ದರೆ, ಈ ಸಿನಿಮಾ ಸಾಧ್ಯವಾಗುತ್ತಿರಲಿಲ್ಲ. ಪ್ರತಿಯೊಬ್ಬರಿಗೂ ನಾನು ಚಿರ ಋಣಿ ಎಂದರು ನಿರ್ದೇಶಕ ಸುಜಯ್ ಶಾಸ್ತ್ರಿ.
ಇಂದು ನಮ್ಮ ಚಿತ್ರದ ಗೋಲ್ಡ್ ಫ್ಯಾಕ್ಟರಿ ಎಂಬ ಮೊದಲ ಹಾಡು ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ನಾನು ತುಂಬಾ ಸಿಟ್ಟಾಗಿರುತ್ತೇನೆ. ಅದಕ್ಕೊಂದು ಕಾರಣವೂ ಇರುತ್ತದೆ. ಹಾಡು, ಚಿತ್ರ ಎರಡೂ ಬಹಳ ಚೆನ್ನಾಗಿ ಮೂಡಿ ಬಂದಿದೆ. ಇದೊಂದು ವಿಭಿನ್ನವಾದ ಚಿತ್ರ. ಸುಜಯ್ ಶಾಸ್ತ್ರಿ ಅವರಿಂದ ತುಂಬಾ ಕಲಿತೆ. ಅವರು ನನ್ನನ್ನು ಚೆನ್ನಾಗಿ ಮೌಲ್ಡ್ ಮಾಡಿದ್ದಾರೆ ಎಂದರು ನಾಯಕ ಚಂದನ್ ಶೆಟ್ಟಿ.
ನಟಿಯಾಗಿ ಒಂದು ಕಾಮಿಡಿ ಚಿತ್ರದಲ್ಲಿ ಕಾಣಿಸಿಕೊಳ್ಳಬೇಕು ಎಂದು ಬಹಳ ಆಸೆ ಇತ್ತು. ಆ ಆಸೆ ಈ ಚಿತ್ರದ ಮೂಲಕ ಈಡೇರಿದೆ. ಚಿತ್ರದಲ್ಲಿ ಅದ್ಭುತವಾದ ತಾರಾಗಣವಿದೆ. ತಾರಾ, ದತ್ತಣ್ಣ, ಮಂಡ್ಯ ರಮೇಶ್, ಮಂಜು ಪಾವಗಡ, ರಜನಿಕಾಂತ್ ಮುಂತಾದವರು ಅಭಿನಯಿಸಿದ್ದಾರೆ.