ಕರ್ನಾಟಕದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿಗಳು, ಜನರ ಜೀವನ ಮಟ್ಟ ಸುಧಾರಿಸುವಲ್ಲಿ, ಪ್ರಮುಖ ಪಾತ್ರ ವಹಿಸಿವೆಯಂತೆ. ಶಿಕ್ಷಣ, ಆರೋಗ್ಯದ ಮೇಲೆ ಗಮನಹರಿಸಲು ಕಾರಣವಾಗಿದೆಯಂತೆ. ಹೀಗಂತ ಅಧ್ಯಯನವೊಂದರ ವರದಿ ಹೇಳಿದೆ.
ಪೊಲಿಟಿಕಲ್ ಶಕ್ತಿ ಮತ್ತು ಸಿಟಿಜನ್ಸ್ ಫಾರ್ ಬೆಂಗಳೂರು ಸಂಸ್ಥೆಗಳ ಸಹ-ಸಂಸ್ಥಾಪಕಿ, ತಾರಾ ಕೃಷ್ಣಮೂರ್ತಿ ನೇತೃತ್ವದಲ್ಲಿ ಈ ಅಧ್ಯಯನ ನಡೆಸಲಾಗಿದೆ. 5 ಗ್ಯಾರಂಟಿಗಳ ಬಗ್ಗೆ 4 ಸಂಶೋಧನಾ ಮತ್ತು ಶೈಕ್ಷಣಿಕ ಸಂಸ್ಥೆಗಳು, ಸಮಗ್ರವಾಗಿ ನಡೆಸಿದ ಅಧ್ಯಯನದ ಆಧಾರದಲ್ಲಿ ಈ ವರದಿಯನ್ನು ತಯಾರಿಸಲಾಗಿದೆ.
ಶಕ್ತಿ ಯೋಜನೆ ಫಲಾನುಭವಿಗಳಲ್ಲಿ ಶೇಕಡಾ 19ರಷ್ಟು ಮಂದಿ, ಹೊರಗೆ ಹೋಗಿ ದುಡಿಯಲು ಶುರು ಮಾಡಿದ್ದಾರೆ. ಗೃಹಲಕ್ಷ್ಮೀ ಹಣದಲ್ಲಿ ಬಹುತೇಕ ಮಹಿಳೆಯರು, ತಮ್ಮ ಪರಿವಾರದ ಕ್ಷೇಮಕ್ಕಾಗಿ ಆ ಹಣವನ್ನು ಮೀಸಲಿಟ್ಟಿದ್ದಾರೆ. 2000 ರೂಪಾಯಿ ಬಳಸಿ ಶೇ.94ರಷ್ಟು ಮಹಿಳೆಯರು ಉತ್ತಮ ಆಹಾರ ಖರೀದಿ ಮಾಡಿದ್ದಾರೆ. ಅನ್ನಭಾಗ್ಯದಿಂದಾಗಿ ಶೇಕಡ 91ರಷ್ಟು ಕುಟುಂಬಗಳು ತರಕಾರಿ, ಹಾಲು ಸೇರಿದಂತೆ ಬೇರೆ ಖರೀದಿಯನ್ನು ಹೆಚ್ಚಿಸಿವೆ. ಗೃಹಜ್ಯೋತಿಯಿಂದಾಗಿ ದೈನಂದಿನ ಕೆಲಸಗಳು ಸುಲಭವಾಗಿದ್ದು, ಎಲೆಕ್ಟ್ರಿಕ್ ಉಪಕರಣಗಳ ಖರೀದಿ ಹೆಚ್ಚಾಗಿದೆ. ಇನ್ನು, ಶೇ.42ರಷ್ಟು ಯುವನಿಧಿ ಫಲಾನುಭವಿಗಳು ಈ ಹಣವನ್ನು ಕೌಶಲ್ಯಾಭಿವೃದ್ಧಿಗೆ ಬಳಸುತ್ತಿದ್ದಾರೆಂದು, ವರದಿಯಲ್ಲಿ ಹೇಳಲಾಗಿದೆ.