ರಾಜ್ಯಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವಿಷಯಗಳ ಮೇಲೆ ನಿಗಾವಹಿಸಲು ರಾಜ್ಯ ಸರ್ಕಾರ ಹೊಸ ಕ್ರಮ ತೆಗೆದುಕೊಂಡಿದೆ. 67.26 ಕೋಟಿ ರೂ. ವೆಚ್ಚದಲ್ಲಿ ಕೃತಕ ಬುದ್ಧಿಮತ್ತೆ ಚಾಲಿತ ಸೋಷಿಯಲ್ ಮೀಡಿಯಾ ಅನಾಲಿಟಿಕ್ಸ್ ಸಲ್ಯೂಷನ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಸುಳ್ಳು ಸುದ್ದಿ, ದ್ವೇಷ ಪ್ರಚಾರ, ಕಾನೂನು ವ್ಯವಸ್ಥೆಗೆ ಹಾನಿ ಮಾಡುವ ವಿಷಯಗಳನ್ನು ಕಮಾಂಡಿಂಗ್ ಸೆಂಟರ್ ಮೂಲಕ ತಕ್ಷಣ ಸ್ಕ್ಯಾನ್ ಮಾಡುವುದು. ಮಕ್ಕಳ ಕಳ್ಳಸಾಗಣೆ, ಅಪರಾಧಿಕ ಚಟುವಟಿಕೆಗಳು, ಭಯೋತ್ಪಾದನೆ, ಉಗ್ರಗಾಮಿಗಳ ನೇಮಕಾತಿ, ಆತ್ಮಹತ್ಯೆ ಅಥವಾ ಕೊಲೆ ಪ್ರಚೋದನೆ ಸೇರಿದಂತೆ ತುರ್ತು ಪರಿಸ್ಥಿತಿಗಳನ್ನು ಪತ್ತೆ ಹಚ್ಚಿ, ಸಂಬಂಧಪಟ್ಟ ಜಿಲ್ಲೆಗಳಿಗೆ ಸ್ಥಳ ಮಾಹಿತಿ ಸಹಿತ ತಕ್ಷಣ ಅಲರ್ಟ್ ಸಂದೇಶ ರವಾನಿಸುವುದು.
ಜಿಯೋ ಸ್ಪೆಸಿಫಿಕ್ ಥ್ರೆಟ್ ಮ್ಯಾಪಿಂಗ್ ಮೂಲಕ ತುರ್ತು ಎಚ್ಚರಿಕೆ ನೀಡುವುದು. ಸಂಬಂಧಪಟ್ಟ ಸಾಮಾಜಿಕ ಜಾಲತಾಣದ ಮೂಲ ದಾಖಲೆಗಳನ್ನು ಸಂಗ್ರಹಿಸಿ ತನಿಖೆ ಮತ್ತು ಸಾಕ್ಷ್ಯ ಸಂಗ್ರಹಕ್ಕೆ ನೆರವು ಒದಗಿಸುವುದು. FIR ದಾಖಲೆ ಮಾಡಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸುವುದು.
ಗುರುವಾರದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರು, ಸುದ್ದಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚುತ್ತಿರುವ ದ್ವೇಷ ಭಾಷಣ, ಸುಳ್ಳು ಸುದ್ದಿ ಹಾಗೂ ಅಪರಾಧ ಪ್ರಚೋದನೆಗಳಿಗೆ ಕಣ್ಣಿಡಲು ಈ ಎಐ ಆಧಾರಿತ ತಂತ್ರಾಂಶ ವ್ಯವಸ್ಥೆ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.
ಕಾನೂನು ಸಚಿವ ಎಚ್.ಕೆ. ಪಾಟೀಲ್ ಸ್ಪಷ್ಟಪಡಿಸಿದ್ದು, ಮುಖ್ಯವಾಹಿನಿ ಅಥವಾ ವಾರ್ತಾ ಇಲಾಖೆಯೊಂದಿಗೆ ನೋಂದಣಿ ಹೊಂದಿರುವ ಅಧಿಕೃತ ಮಾಧ್ಯಮ ಸಂಸ್ಥೆಗಳ ಜಾಲತಾಣಗಳ ಮೇಲೆ ಈ ಎಐ ಸಾಫ್ಟ್ವೇರ್ಗೆ ಪ್ರವೇಶವಿಲ್ಲ. ಅಂದರೆ, ಮುಖ್ಯವಾಹಿನಿ ಮಾಧ್ಯಮಗಳ ಸಾಮಾಜಿಕ ಜಾಲತಾಣಗಳು ನಿಗಾವಹನೆಯ ವ್ಯಾಪ್ತಿಗೆ ಒಳಪಟ್ಟಿಲ್ಲ ಎಂದು ಹೇಳಿದ್ದಾರೆ.
ವರದಿ : ಲಾವಣ್ಯ ಅನಿಗೋಳ




