Political news: ಜಾತಿ ಗಣತಿ ಸಮೀಕ್ಷೆಗೆ ಸಂಬಂಧಿಸಿದಂತೆ, ರಾಜ್ಯ ರಾಜಕಾರಣದಲ್ಲಿ ಚರ್ಚೆ ಜೋರಾಗಿದ್ದು, ಪರಿ ವಿರೋಧ ಹೇಳಿಕೆಗಳು ಪ್ರತಿದಿನ ಕೇಳಿಬರುತ್ತಿದೆ. ಕಾಂಗ್ರೆಸ್ ವಿರುದ್ಧ ಬಿಜೆಪಿ, ಜೆಡಿಎಸ್ ವಾಗ್ದಾಳಿ ನಡೆಸುತ್ತಿರುವುದಲ್ಲದೇ, ಕಾಂಗ್ರೆಸ್‌ನಲ್ಲೇ ಬಣ ಬಡಿದಾಟವಾಗುತ್ತಿದೆ ಎನ್ನಲಾಗಿದೆ. ಇನ್ನು ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಸಿಎಂ ಸಿದ್ದರಾಮಯ್ಯ ವಿರುದ್ಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿಗೆ ದುಡ್ಡಿಲ್ಲ
ರಾಜ್ಯದ ಪ್ರಗತಿಗೆ ಯಾವುದೇ ದೂರದೃಷ್ಟಿ ಇಲ್ಲ
ಹೂಡಿಕೆದಾರರನ್ನು, ಉದ್ಯಮಿಗಳನ್ನು ಆಕರ್ಷಿಸುವ, ಹಿಡಿದಿಟ್ಟುಕೊಳ್ಳುವ ಆಸಕ್ತಿ ಇಲ್ಲ
ಇವ್ಯಾವುದೂ ಇಲ್ಲದೆ ಹಿಂದೆಂದೂ ಕಂಡರಿಯದ ದುರಾಡಳಿತ, ಭ್ರಷ್ಟಾಚಾರದ ಕೂಪದಲ್ಲಿ ರಾಜ್ಯವನ್ನ ಮುಳುಗಿಸಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಮುಜುಗರಕ್ಕೊಳಗಾದಾಗಲೆಲ್ಲ ಜನರ ದಿಕ್ಕು ತಪ್ಪಿಸಲು, ಸಾರ್ವಜನಿಕರ ಗಮನ ಬೇರೆಡೆ ಸೆಳೆಯಲು ಜಾತಿಗಣತಿ ಎಂಬ ಮೆಗಾ ಸೀರಿಯಲ್ ನ ಒಂದೊಂದೇ ಸಂಚಿಕೆ ಹೊರಬಿಡುವ ನಾಟಕ ಮಾಡುತ್ತಿದೆ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ, ಇನ್ನೆಷ್ಟು ದಿನ ಸ್ವಾಮಿ ಈ ಭಂಡ ಬಾಳು. ನೀವು ಹೇಳಿದ್ದನ್ನ ನಿಮ್ಮ ಸಂಪುಟ ಸದಸ್ಯರೂ ಒಪ್ಪುವುದಿಲ್ಲ, ಶಾಸಕರೂ ಒಪ್ಪುವುದಿಲ್ಲ, ಹೈಕಮಾಂಡ್ ಅಂತೂ ನಿಮ್ಮ ಮಾತಿಗೆ ಮೊದಲೇ ಕಿಮ್ಮತ್ತು ಕೊಡುತ್ತಿಲ್ಲ. ಸಾಕು ಈ ಭಂಡ ಬಾಳು. ರಾಜೀನಾಮೆ ಕೊಟ್ಟು ರಾಜ್ಯವನ್ನು ಉಳಿಸಿ ಸ್ವಾಮಿ ಎಂದು ವ್ಯಂಗ್ಯವಾಗಿಯೇ ಅಶೋಕ್ ಸಿಎಂ ಸಿದ್ದರಾಮಯ್ಯ ಅವರನ್ನು ತಿವಿದಿದ್ದಾರೆ.
ಇನ್ನು ಕೆಲ ದಿನಗಳ ಹಿಂದೆ ಹಾಸನದ ಮೊಸಳೆಹೊಸಹಳ್ಳಿ ಗಣೇಶ ವಿಸರ್ಜನೆ ಮರವಣಿಗೆಯಲ್ಲಿ ಅಪಘಾತವಾಗಿ, ಹಲವರು ಮರಣಿಸಿದ್ದು, ಅವರ ಚಿಕಿತ್ಸೆ ವೆಚ್ಚ ಮತ್ತು ಪರಿಹಾರ ಧನ ಇನ್ನೂ ಸಿಗಲಿಲ್ಲವೆಂದು ಆರೋಪಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತಪಡಿಸಿರುವ ಆರ್.ಅಶೋಕ್, ಹಾಸನದ ಮೊಸಳೆಹೊಸಹಳ್ಳಿ ಗಣೇಶ ವಿಸರ್ಜನೆ ಮರವಣಿಗೆಯಲ್ಲಿ ಭಾಗವಹಿಸಿದ್ದ ಜನರ ಮೇಲೆ ಟ್ರಕ್ ಹರಿದು 10 ಜನರು ಸಾವನ್ನಪ್ಪಿ, 21 ಜನರು ಗಾಯಗೊಂಡ ಪ್ರಕರಣದಲ್ಲಿ ಗಾಯಗೊಂಡವರ ಚಿಕಿತ್ಸಾ ವೆಚ್ಚ ಭರಿಸುವ ಭರವಸೆ ನೀಡಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದ್ದ 50,000 ರೂಪಾಯಿ ಪರಿಹಾರವನ್ನೂ ನೀಡಿಲ್ಲ, ಚಿಕಿತ್ಸಾ ವೆಚ್ಚವನ್ನು ಭರಿಸುತ್ತಿಲ್ಲ ಎಂದಿದ್ದಾರೆ.
ಕನಿಷ್ಠ ಪಕ್ಷ ಸಚಿವರು, ಶಾಸಕರು ಅಥವಾ ಹಿರಿಯ ಅಧಿಕಾರಿಗಳು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡುವ ಕನಿಷ್ಠ ಸೌಜನ್ಯವೂ ತೋರುತ್ತಿಲ್ಲ.
ಸಿಎಂ ಸಿದ್ದರಾಮಯ್ಯನವರೇ, ಹಿಮಾಚಲ ಪ್ರದೇಶದಲ್ಲಿ ಪ್ರವಾಹವಾದರೆ ₹5 ಕೋಟಿ ರೂಪಾಯಿ ಕೊಡಲು ದುಡ್ಡಿದೆ. ವಯನಾಡಿನಲ್ಲಿ ಭೂಕುಸಿತವಾದರೆ 100 ಮನೆ ಕಟ್ಟಿಕೊಡಲು ದುಡ್ಡಿದೆ. ಆದರೆ ನಮ್ಮ ರಾಜ್ಯದ ಯುವಕರ ಚಿಕಿತ್ಸೆಗೆ ಹಣ ಕೊಡಲು ದುಡ್ಡಿಲ್ಲ. ಈ ಜನವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ! ಎಂದು ಆರ್.ಅಶೋಕ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆಯುವ ಮೂಲಕ, ಆಕ್ರೋಶ ವ್ಯಕ್ತಪಡಿಸಿದ್ದಾರೆ.

